Asianet Suvarna News Asianet Suvarna News

ಟಾಪ್ಲಿ ಇಂಜುರಿ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ದಿನೇಶ್ ಕಾರ್ತಿಕ್? ಈಗ ಹೇಗಿದ್ದಾರೆ ಆರ್‌ಸಿಬಿ ವೇಗಿ?

ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು
5 ಬಾರಿಯ ಚಾಂಪಿಯನ್ ಮುಂಬೈ ಎದುರು ಆರ್‌ಸಿಬಿಗೆ 8 ವಿಕೆಟ್‌ ಜಯಭೇರಿ
ಪಂದ್ಯದ ವೇಳೆ ಗಾಯಗೊಂಡ ಆರ್‌ಸಿಬಿ ವೇಗಿ ಬಗ್ಗೆ ಡಿಕೆ ಮಾತು

IPL 2023 RCB Cricketer Dinesh Karthik Provides Major Update on Reece Topley Injury kvn
Author
First Published Apr 4, 2023, 11:51 AM IST

ಬೆಂಗಳೂರು(ಏ.04) ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ IPL ಅಭಿಯಾನವನ್ನು ಭರ್ಜರಿ ಜಯದೊಂದಿಗೆ ಆರಂಭಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್ ( 73) ಹಾಗೂ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ (82*) ಶತಕದ ಜೊತೆಯಾಟದ ನೆರವಿನಿಂದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 8 ವಿಕೆಟ್‌ ಜಯ ಸಾಧಿಸಿತು. ಅಂದಹಾಗೆ ಇದು ಕಳೆದ 5 ಪಂದ್ಯಗಳ ಪೈಕಿ ಮುಂಬೈ ಎದುರು ಆರ್‌ಸಿಬಿಗೆ ನಾಲ್ಕನೇ ಜಯ ಎನಿಸಿಕೊಂಡಿತು. 

ಪಂದ್ಯವನ್ನು ಗೆದ್ದು ಬೀಗುತ್ತಿದ್ದ ಆತಿಥೇಯ ಬೆಂಗಳೂರು ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ RCB ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿತು. ಇಂಗ್ಲೆಂಡ್ ಮೂಲದ ಎಡಗೈ ವೇಗಿ ರೀಸ್ ಟಾಪ್ಲಿ  ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತವಾದ ಬೌಲಿಂಗ್ ದಾಳಿಯಿಂದ ತಂಡಕ್ಕೆ ಒಳ್ಳೆಯ ಆರಂಭ ನೀಡಿದರು.

ಆದರೆ  ಮುಂಬೈ ಇಂಡಿಯನ್ಸ್ ತಂಡದ ಇನಿಂಗ್ಸ್‌ನ 8ನೇ ಓವರ್ ನಲ್ಲಿ  ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಟಾಪ್ಲಿ, ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಇನಿಂಗ್ಸ್‌ನ 8 ನೇ ಓವರ್‌ ನ ಮೂರನೇ ಎಸೆತದಲ್ಲಿ, ಟಾಪ್ಲಿ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಡೈವ್ ಮಾಡಿದರು ದುರಾದೃಷ್ಟವಶಾತ್ ಅವರು ಭುಜದ ನೋವಿಗೆ ಒಳಗಾದರು. ತೀವ್ರ ನೋವಿನಿಂದ ಬಳಲುತ್ತಿದ್ದ ಟಾಪ್ಲಿಯನ್ನು ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿ ಮತ್ತು ಫಿಸಿಯೋ ಮೈದಾನದಿಂದ ಹೊರಗೆ ಕರೆದೊಯ್ದುರು.‌ ನಂತರ ಮೈದಾನಕ್ಕೆ ಹಿಂದಿರುಗದೆ ಪಂದ್ಯದಿಂದ ಹೊರಬಿದ್ದರು.

ಇನ್ನು ವೇಗಿ ಟಾಪ್ಲಿ ಗಾಯದ ಪರಿಸ್ಥಿತಿಯ ಬಗ್ಗೆ ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ ಮೊದಲ ಬಾರಿಗೆ ತುಟಿಬಿಚ್ಚಿದ್ದು, "ಟಾಪ್ಲಿಯು ಗಂಭೀರವಾಗಿ ಗಾಯಗೊಂಡಂತೆ ಕಂಡುಬರುತ್ತಿದೆ ಹಾಗೂ ಅವರು ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಅವರ ಭುಜಕ್ಕೆ ಕೊಂಚ ಪೆಟ್ಟಾದಂತೆ ಕಂಡು ಬಂದಿದೆ. ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿಯೇ ಅವರು ಸ್ಕ್ಯಾನ್‌ಗೆ ಹೋಗಿ ಬಂದಿದ್ದಾರೆಂದು ಕಾಣುತ್ತದೆ. ಆದರೆ ನಾವಂದುಕೊಂಡಷ್ಟು ಅವರಿಗೆ ಗಾಯವಾದಂತೆ ಅನಿಸುತ್ತಿಲ್ಲ. ಆದರೆ ಅವರಿಗೆ ಗಾಯದ ಪ್ರಮಾಣ ಯಾವ ಮಟ್ಟದ್ದು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ" ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಗಾಯಗೊಳ್ಳುವ ಮುನ್ನ, ಟೋಪ್ಲಿ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಬೌಲ್ಡ್ ಮಾಡುವ  ಮೂಲಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿದರು. ಎಡಗೈ ವೇಗಿ ಆರ್‌ಸಿಬಿ ಪರ 2 ಓವರ್‌ಗಳನ್ನು ಬೌಲ್ ಮಾಡಿ 14 ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು.

ಈಗಾಗಲೇ ಆರ್‌ಸಿಬಿ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ವಿಲ್ ಜ್ಯಾಕ್ಸ್‌ ಹಾಗೂ ರಜತ್ ಪಾಟೀದಾರ್‌, ಜೋಶ್ ಹೇಜಲ್‌ವುಡ್‌ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ವಿಲ್ ಜ್ಯಾಕ್ಸ್‌ ಟೂರ್ನಿಯಿಂದಲೇ ಹೊರಬಿದ್ದಿದ್ದರೇ, ಪಾಟೀದಾರ್ ಹಾಗೂ ಹೇಜಲ್‌ವುಡ್‌, ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಟಾಪ್ಲಿ ಕೂಡಾ ಗಾಯಗೊಂಡಿರುವುದು, ಆರ್‌ಸಿಬಿ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.  ಆರ್‌ಸಿಬಿ ತಂಡವು ಏಪ್ರಿಲ್ 06ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ದ ತನ್ನ ಪಾಲಿನ ಎರಡನೇ ಪಂದ್ಯ ಆಡಲಿದ್ದು, ಈ ಪಂದ್ಯಕ್ಕೂ ಮುನ್ನ ಟಾಪ್ಲಿ ಗಾಯದಿಂದ ಚೇತರಿಸಿಕೊಳ್ಳಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios