ರವೀಂದ್ರ ಜಡೇಜಾ ನೇತೃತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತೋರಿದ ಮಾರಕ ದಾಳಿಗೆ ಕಂಗೆಟ್ಟ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕೇವಲ 134 ರನ್‌ ಪೇರಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ 4ನೇ ಗೆಲುವಿಗೆ 135 ರನ್‌ ಬೆನ್ನಟ್ಟಬೇಕಿದೆ. 

ಬೆಂಗಳೂರು (ಏ.21): ರನ್‌ ಗಳಿಸಲು ಬಹಳ ಕಠಿಣವಾಗಿದ್ದ ಪಿಚ್‌ನಲ್ಲಿ ಅಷ್ಟೇ ಬಿಗಿ ದಾಳಿ ನಡೆಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹೇರಲು ಯಶಸ್ವಿಯಾಗಿದೆ. ಶುಕ್ರವಾರ ಚೆಪಾಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರವೀಂದ್ರ ಜಡೇಜಾ ನೇತೃತ್ವದ ಮಾರಕ ದಾಳಿಗೆ ನಲುಗಿ 134 ರನ್‌ ಬಾರಿಸಲಷ್ಟೇ ಶಕ್ತವಾಯಿತು. ಅರಂಭಿಕ ಆಟಗಾರ ಅಭಿಷೇಕ್‌ ಶರ್ಮ ಬಾರಿಸಿದ 34 ರನ್‌ಗಳೇ ತಂಡದ ಗರಿಷ್ಠ ರನ್‌ ಆಗಿತ್ತು. ಇನ್ನಿಂಗ್ಸ್‌ನ ಮೊದಲ ಎಸೆತದಿಂದಲೇ ಚೆನ್ನೈ ತಂಡದ ಬೌಲರ್‌ಗಳ ಮುಂದೆ ಪರದಾಡಲು ಆರಂಭಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಯಾವ ಹಂತದಲ್ಲೂ ಮೈಚಳಿ ಬಿಟ್ಟು ಬ್ಯಾಟಿಂಗ್‌ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೆ, ಸಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಸನ್‌ರೈಸರ್ಸ್‌ ತಂಡ ಹೆಸರುವಾಸಿಯಾಗಿರುವ ಕಾರಣ, ಚೆನ್ನೈ ತಂಡದ ಚೇಸಿಂಗ್‌ ಕೂಡ ಕುತೂಹಲ ಕೆರಳಿದೆ. ಆರು ಮಂದಿ ಬೌಲರ್‌ಗಳನ್ನು ಬಳಸಿಕೊಂಡು ಎಂಎಸ್‌ ಧೋನಿ ಅತ್ಯಂತ ಚಾಣಾಕ್ಷತನದ ಬೌಲಿಂಗ್ ದಾಳಿ ನಡೆಸುವ ಮೂಲಕ ಸನ್‌ರೈಸರ್ಸ್‌ ತಂಡವನ್ನು ಕಟ್ಟಿಹಾಕಲು ಯಶಸ್ವಿಯಾದರು.