ಲಖನೌದಲ್ಲಿ ಮುಂಬೈ ಇಂಡಿಯನ್ಸ್‌ಗೆ ಲಖನೌ ಸೂಪರ್ ಜೈಂಟ್ಸ್ ಸವಾಲುಪ್ಲೇ-ಆಫ್‌ ಅವಕಾಶ ಗಟ್ಟಿಗೊಳಿಸಿಕೊಳ್ಳಲು ಸೆಣಸಾಟಮಹತ್ವದ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳು

ಲಖನೌ(ಮೇ.16): ಪ್ಲೇ-ಆಫ್‌ ಹಂತ ಪ್ರವೇಶಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಆರಂಭಿಕ ಹಿನ್ನಡೆಯ ಹೊರತಾಗಿಯೂ ಸತತ ಗೆಲುವುಗಳ ಮೂಲಕ ಮುನ್ನುಗ್ಗುತ್ತಿರುವ ಮುಂಬೈ ಇಂಡಿಯನ್ಸ್‌ ಮತ್ತೊಮ್ಮೆ ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ-ಆಫ್‌ಗೇರಲು ಎದುರು ನೋಡುತ್ತಿದೆ. ಲಖನೌ ಸೂಪರ್‌ಜೈಂಟ್ಸ್‌ ಕೂಡ ಪ್ಲೇ-ಆಫ್‌ ರೇಸ್‌ನಲ್ಲಿದ್ದು, ಉಭಯ ತಂಡಗಳು ಮಂಗಳವಾರ ಪರಸ್ಪರ ಎದುರಾಗಲಿವೆ.

12 ಪಂದ್ಯಗಳಿಂದ ಮುಂಬೈ 14 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅಷ್ಟೇ ಪಂದ್ಯಗಳಿಂದ 13 ಅಂಕ ಗಳಿಸಿರುವ ಲಖನೌ 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ-ಆಫ್‌ಗೇರುವ ಅವಕಾಶವನ್ನು ಗಟ್ಟಿಗೊಳಿಸಿಕೊಳ್ಳಲಿದೆ.

ಮುಂಬೈ ಇಂಡಿಯನ್ಸ್‌ ಬ್ಯಾಟರ್‌ಗಳು ಪ್ರಚಂಡ ಲಯದಲ್ಲಿದ್ದು, ಕಳೆದ 7 ಪಂದ್ಯಗಳಲ್ಲಿ 5 ಬಾರಿ 200+ ರನ್‌ ಕಲೆಹಾಕಿದೆ. ಅನುಭವಿ ವೇಗಿಗಳ ಕೊರತೆ ಇದ್ದರೂ, ಲೆಗ್‌ ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಪರಿಣಾಮಕಾರಿಯಾಗುತ್ತಿದ್ದಾರೆ. ಏಕನಾ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿರುವ ಕಾರಣ, ಚಾವ್ಲಾ ಇನ್ನಷ್ಟುಅಪಾಯಕಾರಿಯಾಗಬಹುದು. ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ ರನ್ ಬರ ಅನುಭವಿಸುತ್ತಿದ್ದಾರೆ. ಆದರೆ ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

IPL 2023 ಗಿಲ್ ಸೆಂಚುರಿ, ಶಮಿ ದಾಳಿ, ಹೈದರಾಬಾದ್ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಗುಜರಾತ್!

ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್‌ ಕಳೆದ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿದೆ. ತಂಡ ಸ್ಥಿರ ಪ್ರದರ್ಶನ ತೋರಿದರಷ್ಟೇ ಬಲಿಷ್ಠ ಮುಂಬೈಗೆ ಸೋಲುಣಿಸಲು ಸಾಧ್ಯ. ಬ್ಯಾಟಿಂಗ್ ವಿಭಾಗದಲ್ಲಿ ಕೈಲ್ ಮೇಯರ್ಸ್‌, ಕ್ವಿಂಟನ್ ಡಿ ಕಾಕ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ ಮತ್ತೊಮ್ಮೆ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಇನ್ನು ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್‌, ಅಮಿತ್‌ ಮಿಶ್ರಾ, ನಾಯಕ ಕೃನಾಲ್‌ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಒಟ್ಟು ಮುಖಾಮುಖಿ: 02

ಮುಂಬೈ: 00

ಲಖನೌ: 02

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್‌, ರೋಹಿತ್‌ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ನೇಹಲ್‌ ವಧೇರಾ, ವಿಷ್ಣು ವಿನೋದ್‌, ಟಿಮ್ ಡೇವಿಡ್‌, ಕ್ಯಾಮರೋನ್ ಗ್ರೀನ್‌, ಕ್ರಿಸ್ ಜೊರ್ಡನ್‌, ಪೀಯೂಸ್ ಚಾವ್ಲಾ, ಜೇಸನ್ ಬೆಹ್ರೆನ್‌ಡೊಫ್‌ರ್‍, ಕುಮಾರ್ ಕಾರ್ತಿಕೇಯ, ಆಕಾಶ್‌.

ಲಖನೌ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್‌, ಕ್ವಿಂಟನ್ ಡಿ ಕಾಕ್‌, ಪ್ರೇರಕ್‌ ಮಂಕಡ್, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಕೃನಾಲ್‌ ಪಾಂಡ್ಯ(ನಾಯಕ), ಆಯುಷ್ ಬದೋನಿ, ಯಶ್‌ ಠಾಕೂರ್‌, ರವಿ ಬಿಷ್ಣೋಯ್‌, ಯದುವೀರ್‌ ಸಿಂಗ್, ಆವೇಶ್‌ ಖಾನ್, ಅಮಿತ್ ಮಿಶ್ರಾ.

ಪಂದ್ಯ: ಸಂಜೆ 7.30ರಿಂದ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಏಕನಾ ಕ್ರೀಡಾಂಗಣದ ಪಿಚ್‌ ನಿಧಾನಗತಿಯ ಪಿಚ್‌ ಆಗಿದ್ದು, ಇಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಎನಿಸಲಿದ್ದಾರೆ. ಇಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 2 ಬಾರಿ ಮಾತ್ರ 160ಕ್ಕಿಂತ ಹೆಚ್ಚು ಮೊತ್ತ ದಾಖಲಾಗಿದೆ. ಹೀಗಾಗಿ ದೊಡ್ಡ ಮೊತ್ತ ನಿರೀಕ್ಷಿಸುವುದು ಕಷ್ಟ. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.