ಕ್ರಿಕೆಟ್ ವೃತ್ತಿಜೀವನದ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ ಎಂ ಎಸ್ ಧೋನಿತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಗೆದ್ದು ಬೀಗಿದ ಸಿಎಸ್‌ಕೆಇದರ ಬೆನ್ನಲ್ಲೇ ನಿವೃತ್ತಿಯ ಸುಳಿವು ನೀಡಿದ ಕ್ಯಾಪ್ಟನ್ ಕೂಲ್
ಚೆನ್ನೈ(ಏ.23): ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಸನ್‌ರೈಸರ್ಸ್ ವಿರುದ್ಧದ ಪಂದ್ಯದ ಬಳಿಕ ‘ಕ್ರಿಕೆಟ್ ಬದುಕಿನ ಕೊನೆ ಹಂತದಲ್ಲಿದ್ದೇನೆ’ಎನ್ನುವ ಮೂಲಕ ಇದು ಅವರ ಕೊನೆಯ ಐಪಿಎಲ್ ಆಗಬಹುದು ಎನ್ನುವ ಸುಳಿವು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದ ಬಳಿಕ ಮಾತನಾಡಿದ ಧೋನಿ, ‘ಹೇಳುವುದನ್ನೆಲ್ಲಾ ಹೇಳಾಗಿದೆ. ನಾನು ಇನ್ನೆಷ್ಟು ದಿನ ಆಡುತ್ತೇನೋ, ಆದರೆ ಕೊನೆಯ ಹಂತದಲ್ಲಿದ್ದೇನೆ. 2 ವರ್ಷಗಳ ಬಳಿಕ ಚೆಪಾಕ್ ಕ್ರೀಡಾಂಗಣದಲ್ಲಿ ತವರಿನ ಅಭಿಮಾನಿಗಳು ಐಪಿಎಲ್ ವೀಕ್ಷಿಸುವ ಅವಕಾಶ ಪಡೆದಿದ್ದಾರೆ. ಇಲ್ಲಿ ಆಡಲು ಖುಷಿಯಾಗುತ್ತದೆ. ಇಲ್ಲಿನ ಜನ ಅಪಾರ ಪ್ರೀತಿ, ವಿಶ್ವಾಸ ತೋರಿದ್ದಾರೆ’ ಎಂದು ಧೋನಿ ಚೆನ್ನೈನ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ವಯಸ್ಸು 41 ಆಗಿದ್ದರೂ ಯುವಕರೂ ಕೂಡಾ ನಾಚುವಂತಹ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಮಹೇಂದ್ರ ಸಿಂಗ್ ಧೋನಿ ಯಶಸ್ವಿಯಾಗಿದ್ದಾರೆ. 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಧೋನಿ, ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಎಂ ಎಸ್ ಧೋನಿ, ಇಂಗ್ಲೆಂಡ್‌ನಲ್ಲಿ 2019ರ ಜುಲೈನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಅವರಾಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎನಿಸಿಕೊಂಡಿತ್ತು. ಇನ್ನು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ 2021ರಲ್ಲಿ ತಮ್ಮ ಚಾಣಾಕ್ಷ ನಾಯಕತ್ವದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
KKR vs CSK: ಸತತ 4ನೇ ಸೋಲಿನಿಂದ ಪಾರಾಗುತ್ತಾ ಕೆಕೆಆರ್?
2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಧೋನಿಗೆ ಹೆಚ್ಚಿನ ಸಮಯ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗುತ್ತಿಲ್ಲ. ಅಗ್ರಕ್ರಮಾಂಕದ ಬ್ಯಾಟರ್‌ಗಳೇ ಮ್ಯಾಚ್ ಫಿನಿಶ್ ಮಾಡುತ್ತಿದ್ದಾರೆ. ಹೀಗಿದ್ದೂ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಈಗಾಗಲೇ 6 ಮುಗಿಲೆತ್ತರದ ಸಿಕ್ಸರ್ ಸಿಡಿಸಿದ್ದು, 200ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
ಸದ್ಯ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 2 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಚೆನ್ನೈ ತಂಡವು ನಿತೀಶ್ ರಾಣಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
