Asianet Suvarna News Asianet Suvarna News

IPL 2023 ಸಿರಾಜ್ ಬೆಂಕಿ ಬೌಲಿಂಗ್‌, ಪಂಜಾಬ್‌ ಬಗ್ಗುಬಡಿದ ಆರ್‌ಸಿಬಿ..!

ಪಂಜಾಬ್ ಎದುರು ಗೆದ್ದು ಬೀಗಿದ ಆರ್‌ಸಿಬಿ
4 ವಿಕೆಟ್‌ ಕಬಳಿಸಿ ಮಿಂಚಿದ ಮೊಹಮ್ಮದ್ ಸಿರಾಜ್
ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಆರ್‌ಸಿಬಿ

IPL 2023 Mohammed Siraj Faf Du Plessis Star As RCB Beat Punjab Kinsg By 24 Runs at Mohali kvn
Author
First Published Apr 20, 2023, 7:07 PM IST

ಮೊಹಾಲಿ(ಏ.20): ಫಾಫ್ ಡು ಪ್ಲೆಸಿಸ್‌, ವಿರಾಟ್ ಕೊಹ್ಲಿ ಬಾರಿಸಿದ ಕೆಚ್ಚೆದೆಯ ಅರ್ಧಶತಕ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್‌ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 24 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ ಮೂರು ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್‌ ಎದುರು ಆರ್‌ಸಿಬಿ ತಂಡವು ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ಆರ್‌ಸಿಬಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಮೊಹಮ್ಮದ್ ಸಿರಾಜ್‌, ಆರಂಭಿಕ ಬ್ಯಾಟರ್‌ ಅಥರ್ವ ಟೈಡೆ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಹಸರಂಗ, ಮ್ಯಾಥ್ಯೂ ಶಾರ್ಟ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಪಂಜಾಬ್‌ಗೆ ಮತ್ತೊಂದು ಶಾಕ್ ನೀಡಿದರು. ಇನ್ನು ಈ ಆವೃತ್ತಿಯಲ್ಲಿ ಮೊದಲ ಐಪಿಎಲ್‌ ಪಂದ್ಯವನ್ನಾಡಿದ ಲಿಯಾಮ್‌ ಲಿವಿಂಗ್‌ಸ್ಟೋನ್‌ 2 ರನ್‌ ಬಾರಿಸಿ ಸಿರಾಜ್‌ಗೆ ಎರಡನೇ ಬಲಿಯಾದರು. ಇನ್ನು ಹರ್ಪ್ರೀತ್ ಸಿಂಗ್ ಭಾಟಿಯಾ 13 ರನ್ ಬಾರಿಸಿ ರನೌಟ್ ಆದರೆ, ನಾಯಕ ಸ್ಯಾಮ್ ಕರ್ರನ್‌ 10 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಪಂಜಾಬ್‌ ತಂಡವು 76 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದರು. 

ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಇಂಪ್ಯಾಕ್ಟ್‌ ಪ್ಲೇಯರ್ ಪ್ರಭ್‌ಸಿಮ್ರನ್‌ ಸಿಂಗ್‌ ಚುರುಕಿನ ಬ್ಯಾಟಿಂಗ್ ನಡೆಸಿ ಮಿಂಚಿದರು. ಪ್ರಭ್‌ಸಿಮ್ರನ್‌ ಸಿಂಗ್‌ 30 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಸ್ಪೋಟಕ 46 ರನ್‌ ಬಾರಿಸಿ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಶಾರುಖ್ ಖಾನ್‌ ಕೇವಲ 7 ರನ್‌ ಬಾರಿಸಿ ಹಸರಂಗ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. 

ಫಾಫ್ ಡು ಪ್ಲೆಸಿಸ್‌ ಇದ್ದೂ ವಿರಾಟ್‌ ಕೊಹ್ಲಿ RCB ನಾಯಕರಾಗಿದ್ದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ..!

ಈ ವೇಳೆ ಪಂಜಾಬ್‌ ಕಿಂಗ್ಸ್‌ ತಂಡವು 106 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ 8ನೇ ವಿಕೆಟ್‌ಗೆ ಜಿತೇಶ್ ಶರ್ಮಾ ಹಾಗೂ ಹರ್ಪ್ರೀತ್ ಬ್ರಾರ್ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಹಪ್ರೀತ್ ಬ್ರಾರ್‌ 13 ಎಸೆತಗಳಲ್ಲಿ 13 ರನ್‌ ಬಾರಿಸಿ ಸಿರಾಜ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನೇಥನ್ ಎಲ್ಲಿಸ್‌ ಅವರನ್ನು ಕ್ಲೀನ್‌ ಬೌಲ್ಡ್ ಮಾಡುವ ಮೂಲಕ ಸಿರಾಜ್, ಪಂಜಾಬ್‌ಗೆ ಡಬಲ್‌ ಶಾಕ್ ನೀಡಿದರು. ಇನ್ನು ಮತ್ತೊಂದು ತುದಿಯಲ್ಲಿ 41 ರನ್ ಬಾರಿಸಿ ಪಂಜಾಬ್‌ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದ ಜಿತೇಶ್ ಶರ್ಮಾ ಅವರನ್ನು ವಿಕೆಟ್‌ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಲ್ಲಿ ಖಚಿತಪಡಿಸಿದರು.

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆರಂಭಿಕ ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್ (84) ಹಾಗೂ ವಿರಾಟ್ ಕೊಹ್ಲಿ(59) ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸುವ ಮೂಲಕ ಪಂಜಾಬ್‌ಗೆ ಸವಾಲಿನ ಗುರಿ ನೀಡಿತ್ತು.

Follow Us:
Download App:
  • android
  • ios