ಸನ್‌ರೈಸರ್ಸ್ ಎದುರು ರೋಚಕ ಜಯ ಸಾಧಿಸಿದ ಲಖನೌ ಸೂಪರ್ ಜೈಂಟ್ಸ್ಆಕರ್ಷಕ ಅರ್ಧಶತಕ ಬಾರಿಸಿದ ಪ್ರೇರಕ್ ಮಂಕಡ್ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್
ಹೈದರಾಬಾದ್(ಮೇ.13): ಪ್ರೇರಕ್ ಮಂಕಡ್ ಅಜೇಯ ಅರ್ಧಶತಕ ಹಾಗೂ ಮಾರ್ಕಸ್ ಸ್ಟೋನಿಸ್ ಮತ್ತು ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಎದುರು ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ಸುಲಭ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಲಖನೌ ತಂಡವು ರಾಜಸ್ಥಾನ ರಾಯಲ್ಸ್ ಹಿಂದಿಕ್ಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಈ ಸೋಲಿನೊಂದಿಗೆ ಆರೆಂಜ್ ಆರ್ಮಿಯ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 183 ರನ್ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಫಾರ್ಮ್‌ನಲ್ಲಿದ್ದ ಕೈಲ್ ಮೇಯರ್ಸ್ 14 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಗ್ಲೆನ್ ಫಿಲಿಫ್ಸ್ ಬೌಲಿಂಗ್‌ನಲ್ಲಿ ಮಾರ್ಕ್‌ರಮ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ಪ್ರೇರಕ್ ಮಂಕಡ್ 42 ರನ್‌ಗಳ ಜತೆಯಾಟವಾಡು ಮೂಲಕ ತಂಡಕ್ಕೆ ಆಸರೆಯಾದರು. ಡಿ ಕಾಕ್ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 29 ರನ್ ಗಳಿಸಿ ಮಯಾಂಕ್ ಮಾರ್ಕಂಡೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಸ್ಟೋನಿಸ್-ಮಂಕಡ್ ಜುಗಲ್ಬಂದಿ: 54 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಲಖನೌ ತಂಡಕ್ಕೆ ಮೂರನೇ ವಿಕೆಟ್‌ಗೆ ಪ್ರೇರಕ್ ಮಂಕಡ್ ಹಾಗೂ ಮಾರ್ಕಸ್ ಸ್ಟೋನಿಸ್ ಜೋಡಿ 73 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು. ಸ್ಟೋನಿಸ್ ಕೇವಲ 25 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 40 ರನ್ ಬಾರಿಸಿ ಅಭಿಷೇಕ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
ಪಂದ್ಯದ ದಿಕ್ಕು ಬದಲಿಸಿದ ಅಭಿಷೇಕ್ ಶರ್ಮಾ ಓವರ್: ಲಖನೌ ಸೂಪರ್ ಜೈಂಟ್ಸ್ ತಂಡವು ಕೊನೆಯ 5 ಓವರ್‍ಗಳಲ್ಲಿ ಗೆಲ್ಲಲು 69 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ 16ನೇ ಓವರ್ ಬೌಲಿಂಗ್ ಮಾಡಿದ ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಸ್ಟೋನಿಸ್ ಹಾಗೂ ಪೂರನ್ ಸೇರಿ ಒಟ್ಟು 5 ಸಿಕ್ಸರ್ ಚಚ್ಚಿದರು. ಸ್ಟೋನಿಸ್ ವಿಕೆಟ್ ಕಬಳಿಸಿದರಾದರೂ, ಒಟ್ಟಾರೆ 31 ರನ್ ಬಿಟ್ಟುಕೊಟ್ಟಿದ್ದು, ಪಂದ್ಯ ಲಖನೌ ಪರ ವಾಲುವಂತೆ ಮಾಡಿತು.
ಕೊನೆಯ ಕ್ಷಣದವರೆಗೂ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಪ್ರೇರಕ್ ಮಂಕಡ್ 45 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 64 ರನ್ ಬಾರಿಸಿ ಅಜೇಯರಾಗುಳಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್ ಕೇವಲ 13 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 44 ರನ್ ಬಾರಿಸಿ ಇನ್ನು 4 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
