ಟ್ರೋಲ್ ತಾಳಲಾರದೇ 'ಮ್ಯಾಂಗೋ', 'ಸ್ವೀಟ್' ಪದಗಳನ್ನು ಮ್ಯೂಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್..!
ಐಪಿಎಲ್ ಎಲಿಮಿನೇಟರ್ ಹಂತದಲ್ಲಿ ಮುಗ್ಗರಿಸಿದ ಲಖನೌ ಸೂಪರ್ ಜೈಂಟ್ಸ್
ಲಖನೌ ಸೋಲಿನ ಬೆನ್ನಲ್ಲೇ ನವೀನ್ ಉಲ್ ಹಕ್ ಟ್ರೋಲ್
ಕೆಲವು ಪದಗಳನ್ನು ಮ್ಯೂಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್
ಚೆನ್ನೈ(ಮೇ.25): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ತಂಡದ ವೇಗಿ ನವೀನ್ ಉಲ್-ಹಕ್ ಅವರ ಮೇಲೆ ನೆಟ್ಟಿಗರು ನಿರಂತರವಾಗಿ ಟ್ರೋಲ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು "ಮ್ಯಾಂಗೋ", "ಮ್ಯಾಂಗೋಸ್", "ಸ್ವೀಟ್" ಮತ್ತು "ಆಮ್" ಪದಗಳಿಗೆ ಮೌನ ವಿದಾಯ(ಮ್ಯೂಟ್) ಹೇಳಿದೆ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ(ಮೇ.24) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಎದುರು ನವೀನ್ ಉಲ್ ಹಕ್ 4 ವಿಕೆಟ್ ಕಬಳಿಸಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಮ್ಯಾಂಗೋ ಕುರಿತಾದ ಕಾಂಟ್ರೋವರ್ಸಿಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಮ್ಯಾಂಗೋ", "ಮ್ಯಾಂಗೋಸ್", "ಸ್ವೀಟ್" ಮತ್ತು "ಆಮ್" ಪದಗಳನ್ನು ಮ್ಯಾಟ್ ಮಾಡಿರುವುದಾಗಿ ತಿಳಿಸಿದೆ. ಲೀಗ್ ಹಂತದಲ್ಲಿ ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಪಂದ್ಯದ ವೇಳೆಯಲ್ಲಿಯೇ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕವೂ ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ ಹಾಗೂ ತಂಡದ ಮೆಂಟರ್ ಗೌತಮ್ ಗಂಭೀರ್, ಸೋಷಿಯಲ್ ಮೀಡಿಯಾಗಳ ಮೂಲಕ ವಿರಾಟ್ ಕೊಹ್ಲಿ ಕಾಲೆಳೆಯುವ ಪ್ರಯತ್ನ ನಡೆಸಿದ್ದರು.
ವಿರಾಟ್ ಔಟಾಗಿದ್ದನ್ನು ಸಂಭ್ರಮಿಸಿದ ಆಫ್ಘಾನಿ ಕ್ರಿಕೆಟಿಗ ನವೀನ್ ಉಲ್-ಹಕ್..! ನೆಟ್ಟಿಗರ ಪ್ರತಿಕ್ರಿಯೆ ವೈರಲ್
ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಎದುರು ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುವುದನ್ನು ಟಿವಿಯಲ್ಲಿನ ಫೋಟೋದೊಂದಿಗೆ ಈ ಮಾವಿನ ಹಣ್ಣುಗಳು ತುಂಬಾ ಸಿಹಿಯಾಗಿವೆ ಎಂದು, ಆರ್‌ಸಿಬಿ ಸೋಲಿನ ಬೆನ್ನಲ್ಲೇ, "ಎರಡನೇ ಸುತ್ತಿನದ್ದು ಇವು. ನಾನು ತಿಂದ ಅತ್ಯುತ್ತಮ ಮಾವಿನ ಹಣ್ಣುಗಳಿವು. ಧನ್ಯವಾದಗಳು ಧವಲ್ ಅರ್ಚನಾ ಪರಾಬ್ ಬಾಯ್ ಎಂದು ಬರೆದುಕೊಂಡಿದ್ದರು.
ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು 81 ರನ್ ಅಂತರದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ನೆಟ್ಟಿಗರು ಮಾವಿನ ಹಣ್ಣಿನ ನೆಪ ನೀಡಿ ನವೀನ್ ಉಲ್ ಹಕ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದರು. ಹೀಗಾಗಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಮ್ಮ ಹಿತಾಸಕ್ತಿಯಿಂದ ಎಂದು ಬರೆದು, "ಮ್ಯಾಂಗೋ", "ಮ್ಯಾಂಗೋಸ್", "ಸ್ವೀಟ್" ಮತ್ತು "ಆಮ್" ಮ್ಯೂಟ್ ಮಾಡಲಾಗಿದೆ ಎಂದು ಬರೆದುಕೊಂಡಿದೆ.
ಈ ಟ್ರೋಲ್‌ಗಳನ್ನು ಬದಿಗಿಟ್ಟು ನೋಡಿದರೆ, ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಆಫ್ಘಾನಿಸ್ತಾನ ಮೂಲದ ವೇಗಿ ನವೀನ್ ಉಲ್ ಹಕ್ ಮಾರಕ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಆಫ್ಘಾನ್ ವೇಗಿ ನವೀನ್ ಉಲ್ ಹಕ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಕ್ಯಾಮರೋನ್ ಗ್ರೀನ್ ಹೀಗೆ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ಗೆ 182 ರನ್ ಕಲೆಹಾಕಿತು. ಬಳಿಕ ಆಕಾಶ್ ಮಧ್ವಾಲ್ ಮಾರಕ ದಾಳಿಗೆ ತತ್ತರಿಸಿದ ಲಖನೌ 16.3 ಓವರಲ್ಲಿ 101 ರನ್‌ಗೆ ಸರ್ವಪತನ ಕಂಡಿತು. ಯುವ ವೇಗಿ ಆಕಾಶ್ ಮದ್ವಾಲ್ ಕೇವಲ 5 ರನ್ ನೀಡಿ ಪ್ರಮುಖ 5 ವಿಕೆಟ್ ಕಬಳಿಸುವ ಮೂಲಕ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.