ನಾಯಕ ನಿತೀಶ್‌ ರಾಣಾ ಹಾಗೂ ಆರಂಭಿಕ ಆಟಗಾರ ಜೇಸನ್‌ ರಾಯ್‌ ಆಡಿದ ಸ್ಫೋಟಕ ಇನ್ನಿಂಗ್ಸ್‌ ಫಲವಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ಗೆಲುವಿಗೆ ಕೆಕೆಆರ್‌ ಬೃಹತ್‌ ಸವಾಲನ್ನು ನಿಗದಿ ಮಾಡಿದೆ.

ಬೆಂಗಳೂರು (ಏ.26): ಆರ್‌ಸಿಬಿಯ ಫೀಲ್ಡರ್‌ಗಳು ನೀಡಿದ ಜೀವದಾನಗಳ ಲಾಭ ಪಡೆದ ಕೆಕೆಆರ್‌ ತಂಡದ ಬ್ಯಾಟ್ಸ್‌ಮನ್‌ಗಳು ಸಂಘಟಿತ ಬ್ಯಾಟಿಂಗ್‌ ಮೂಲಕ ಬೃಹತ್ ಮೊತ್ತ ಕಲೆಹಾಕಲು ಯಶಸ್ವಿಯಾಗಿದ್ದಾರೆ. ಆರಂಭಿಕ ಆಟಗಾರ ಜೇಸನ್‌ ರಾಯ್‌ ಹಾಗೂ ಸ್ಲಾಗ್‌ ಓವರ್‌ಗಳಲ್ಲಿ ನಾಯಕ ನಿತೀಶ್‌ ರಾಣಾ ಅಡಿದ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಕೆಕೆಆರ್‌ ತಂಡ ಆರ್‌ಸಿಬಿ ವಿರುದ್ಧ 5 ವಿಕೆಟ್‌ಗೆ 200 ರನ್‌ ಕಲೆಹಾಕಿದೆ. ಸ್ಪೋಟಕ ಬ್ಯಾಟ್ಸ್‌ಮನ್‌ ಆಂಡ್ರೆ ರಸೆಲ್‌ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ, ಸಂಘಟಿತ ಬ್ಯಾಟಿಂಗ್‌ ಫಲವಾಗಿ ಕೆಕೆಆರ್‌ ದೊಡ್ಡ ಮೊತ್ತ ಬಾರಿಸುವಲ್ಲಿ ಯಶಸ್ವಿಯಾಯಿತು. ಕೊನೆ ಹಂತದಲ್ಲಿ ರಿಂಕು ಸಿಂಗ್‌ ಹಾಗೂ ಡೇವಿಡ್‌ ವೈಸ್‌ ಕೆಲವು ಅಬ್ಬರದ ಶಾಟ್‌ಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ಮುಟ್ಟಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡಕ್ಕೆ ಮೊದಲ ವಿಕೆಟ್‌ಗೆ ಜೇಸನ್‌ ರಾಯ್‌ ಹಾಗೂ ಎನ್‌.ಜಗದೀಶನ್‌ 83 ರನ್‌ಗಳ ಜೊತೆಯಾಟವಾಡಿದರು. 58 ಎಸೆತಗಳಲ್ಲಿ ಅಬ್ಬರದ 83 ರನ್‌ ಸಿಡಿಸಿದ ಈ ಜೋಡಿಯನ್ನು ವೈಶಾಕ್‌ ವಿಜಯ್‌ಕುಮಾರ್‌ ಬೇರ್ಪಡಿಸಿದರು. 29 ಎಸೆತಗಳಲ್ಲಿ 27 ರನ್‌ ಬಾರಿಸಿದ ಜಗದೀಶನ್‌ ನಿರ್ಗಮಿಸಿದ ಬಳಿಕ ಜೇಸನ್‌ ರಾಯ್‌ ಕೂಡ ಔಟಾದರು. 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಅಬ್ಬರದ ಸಿಕ್ಸರ್‌ ಸಿಡಿಸುವ ಮೂಲಕ 56 ರನ್‌ ಬಾರಿಸಿದ್ದ ರಾಯ್‌ 10ನೇ ಓವರ್‌ನಲ್ಲಿ ಔಟಾದರು. ಈ ಎರಡೂ ವಿಕೆಟ್‌ಗಳನ್ನು ವೈಶಾಕ್‌ ವಿಜಯ್‌ ಕುಮಾರ್‌ ಉರುಳಿಸಿದರು.

88 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಹಾಗೂ ನಾಯಕ ನಿತೀಶ್‌ ರಾಣಾ 80 ರನ್‌ಗಳ ಜೊತೆಯಾಟವಾಡಿದರು. ಈ ರನ್‌ಗಳು ಕೇವಲ 44 ಎಸೆತಗಳಲ್ಲಿ ಬಂದಿದ್ದವು. ಆದರೆ ವೆಂಕಟೇಶ್‌ ಅಯ್ಯರ್‌ ಎಂದಿನ ಸ್ಪೋಟಕ ಆಟವಾಡುವಲ್ಲಿ ವಿಫಲರಾದರು. 26 ಎಸೆತ ಅಡಿದ ಅಯ್ಯರ್‌, ಕೇವಲ 3 ಬೌಂಡರಿಯೊಂದಿಗೆ 31 ರನ್‌ ಬಾರಿಸಿದರೆ, ನಾಯಕ ರಾಣಾ 21 ರಸೆತಗಳಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 48 ರನ್ ಬಾರಿಸಿದರು.

ನಿತೀಶ್‌ ರಾಣಾ, ಆರ್‌ಸಿಬಿಯ ಫೀಲ್ಡರ್‌ಗಳು ನೀಡಿದ ಮೂರು ಜೀವದಾನದ ಸಂಪೂರ್ಣ ಲಾಭ ಪಡೆದುಕೊಂಡರು. ಆದರೆ, ನಿತೀಶ್‌ ರಾಣಾ ಹಾಗೂ ವೆಂಕಟೇಶ್‌ ಅಯ್ಯರ್‌ ಒಂದೇ ರನ್‌ಗಳ ಅಂತರದಲ್ಲಿ ಔಟಾಗಿದ್ದು ತಂಡಕ್ಕೆ ಮತ್ತೆ ಹಿನ್ನಡೆ ನೀಡಿತು. ಸ್ಫೋಟಕ ಬ್ಯಾಟ್ಸ್‌ಮನ್‌ ಆಂಡ್ರೆ ರಸೆಲ್‌ ಕೇವಲ 2 ಎಸೆತ ಎದುರಿಸಿ ಮೊಹಮದ್‌ ಸಿರಾಜ್‌ ಎಸೆತದಲ್ಲಿ ಬೌಲ್ಡ್‌ ಆದರೆ, ರಿಂಕು ಸಿಂಗ್‌ ಹಾಗೂ ಡೇವಿಡ್‌ ವೈಸ್‌ ಕೊನೆಯಲ್ಲಿ ತಂಡದ ಮೊತ್ತವನ್ನು ಏರಿಸಿದರು.

ಟೀಂ ಇಂಡಿಯಾಗೆ ಬಿಗ್‌ ಶಾಕ್‌; ಏಕದಿನ ವಿಶ್ವಕಪ್‌ನಿಂದಲೂ ರಿಷಭ್‌ ಪಂತ್ ಔಟ್..?

ರಿಂಕು ಸಿಂಗ್‌ ಆಡಿದ 10 ಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿ ಇದ್ದ 18 ರನ್‌ ಬಾರಿಸಿದರೆ, ಡೇವಿಡ್‌ ವೈಸ್‌ ಕೇವಲ 3 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 12 ರನ್‌ ಬಾರಿಸಿದರು. ಆರ್‌ಸಿಬಿ ಪರವಾಗಿ ವಾನಿಂದು ಹಸರಂಗ 24 ರನ್‌ಗೆ 2 ವಿಕೆಟ್ ಉರುಳಿಸಿದರೆ, ವೈಶಾಕ್‌ ವಿಜಯ್‌ಕುಮಾರ್‌ 41 ರನ್‌ಗೆ 2 ವಿಕೆಟ್‌ ಉರುಳಿಸಿದರು.

IPL 2023: ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ, ಕೊಹ್ಲಿ ಮತ್ತೆ ಕ್ಯಾಪ್ಟನ್‌!