ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ರಿಂಕು ಸಿಂಗ್ಬಡಮಕ್ಕಳ ಕ್ರಿಕೆಟ್‌ಗಾಗಿ 50 ಲಕ್ಷದ ಹಾಸ್ಟೆಲ್ ಕಟ್ಟುತ್ತಿರುವ ಕೆಕೆಆರ್ ಸ್ಟಾರ್ ಕ್ರಿಕೆಟಿಗಐಪಿಎಲ್ ಟೂರ್ನಿ ಬಳಿಕ ರಿಂಕು ಸಿಂಗ್ ಅವರಿಂದ ಹಾಸ್ಟೆಲ್ ಉದ್ಘಾಟನೆ
ಅಲಿಗಢ(ಏ.18): ಇತ್ತೀಚೆಗಷ್ಟೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಕೊನೆ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ ಸುದ್ದಿಯಾಗಿದ್ದ ಐಪಿಎಲ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್, ಬಡ ಕ್ರಿಕೆಟಿಗರ ಕನಸಿಗೆ ನೀರೆರೆಯಲು ಹೊಸ ಹಾಸ್ಟೆಲ್ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ತೀರಾ ಬಡ ಕುಟುಂಬದಿಂದ ಬಂದಿರುವ 25 ವರ್ಷದ ರಿಂಕು ಈಗಷ್ಟೇ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದು, ಇದರ ನಡುವೆಯೇ 50 ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡಿ ಅಲಿಗಢ ನಗರದಲ್ಲಿರುವ ತಾವು ಕಲಿತ ಕ್ರಿಕೆಟ್ ಅಕಾಡೆಮಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಉಳಿದುಕೊಳ್ಳಬಹುದಾದ ಹೊಸ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ. ಹೊಸ ಪೆವಿಲಿಯನ್, ಶೌಚಾಲಯ ಕೂಡಾ ನಿರ್ಮಾಣವಾಗುತ್ತಿದೆ.
‘3 ತಿಂಗಳ ಹಿಂದೆ ಕೆಲಸ ಆರಂಭಗೊಂಡಿದ್ದು, ಕೆಕೆಆರ್ ತಂಡ ಕೂಡಿಕೊಳ್ಳುವ ವರೆಗೂ ಸ್ವತಃ ರಿಂಕು ಕಾಮಗಾರಿ ಪರಿಶೀಲಿಸುತ್ತಿದ್ದರು. ಐಪಿಎಲ್ ಮುಕ್ತಾಯಗೊಂಡ ಬಳಿಕ ರಿಂಕು ಸಿಂಗ್ ಈ ಹಾಸ್ಟೆಲ್ ಉದ್ಘಾಟನೆ ಮಾಡಲಿದ್ದಾರೆ’ ಎಂದು ಅವರ ಬಾಲ್ಯದ ಕೋಚ್ ಮಸೂದ್ ಝಫರ್ ತಿಳಿಸಿದ್ದಾರೆ. 2018ರಲ್ಲಿ ರಿಂಕು ಅವರನ್ನು ಕೆಕೆಆರ್ 80 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು.
7 ಸದಸ್ಯರ ಕುಟುಂಬ:
ರಿಂಕು ಅವರದ್ದು 7 ಸದಸ್ಯರ ಕುಟುಂಬ. ತಂದೆ, ತಾಯಿ ಜತೆ ರಿಂಕುಗೆ ನಾಲ್ವರು ಸಹೋದರರಿದ್ದಾರೆ. ತಂದೆ ಖಾನ್‌ಚಾಂದ್ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಡೆಲಿವರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ರಿಂಕು ಹಾಗೂ ಕುಟುಂಬಕ್ಕೆ ಜೀವನ ಸಾಗಿಸುವುದು ಕಷ್ಟವಾಗಿತ್ತು. ಆದರೆ ಛಲ ಬಿಡದ ರಿಂಕು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲ ಕುಟುಂಬದವರ ಜೀವನವನ್ನೂ ಬದಲಿಸಿದ್ದಾರೆ.
ಕಸ ಗುಡಿಸುವ ಕೆಲಸಕ್ಕೆ ಹೋಗ್ಬೇಕಿತ್ತು!:
ರಿಂಕು 8-9 ವರ್ಷಗಳ ಹಿಂದೆ ಉತ್ತರ ಪ್ರದೇಶ ಅಂಡರ್-16 ತಂಡದಲ್ಲಿ ಆಡುತ್ತಿದ್ದ ಸಮಯ. ಕುಟುಂಬ ನಿರ್ವಹಣೆಗೆ ಐವರು ಸಹೋದರರು ಸಿಕ್ಕ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಾ ತಂದೆಗೆ ನೆರವಾಗುತ್ತಿದ್ದರು. ಆ ಸಮಯದಲ್ಲಿ ಅವರ ಸಹೋದರನೊಬ್ಬ ರಿಂಕುಗೆ ಕಸ ಗುಡಿಸುವ ಕೆಲಸವೊಂದಕ್ಕೆ ಸೇರಿಸಿದ್ದರಂತೆ. ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಿಂಕು ಈ ವಿಷಯವನ್ನು ಬಹಿರಂಗಪಡಿಸಿದ್ದರು. ‘ಟ್ಯೂಷನ್ ಸೆಂಟರ್‌ನಲ್ಲಿ ನೀನು ಕಸ ಗುಡಿಸಿ, ನೆಲ ಒರೆಸುತ್ತೀಯ ಎಂದು ಯಾರ ಬಳಿಯೂ ಹೇಳುವ ಅಗತ್ಯವಿಲ್ಲ. ನಿತ್ಯ ಬೆಳಗ್ಗೆ ನಿನ್ನ ಪಾಡಿಗೆ ಹೋಗಿ ಕೆಲಸ ಮುಗಿಸಿ ಬಂದರಾಯಿತು. ಯಾರಿಗೂ ವಿಷಯ ತಿಳಿಯುವುದಿಲ್ಲ’ ಎಂದು ರಿಂಕು ಸಿಂಗ್‌ರ ತಂದೆ ಅವರಿಗೆ ಹೇಳಿದ್ದರಂತೆ. ಆದರೆ ರಿಂಕುಗೆ ಆ ಕೆಲಸ ಇಷ್ಟವಿರಲಿಲ್ಲ. ಮಗ ಕೆಲಸಕ್ಕೆ ಕೈ ಜೋಡಿಸದೆ ಕ್ರಿಕೆಟ್ ಆಡುವುದಕ್ಕೆ ತಂದೆ ಒಪ್ಪುತ್ತಿರಲಿಲ್ಲ.
IPL 2023: ವೆಂಕಟೇಶ್ ಆಯ್ಯರ್ ಸಿಡಿಸಿದ ಶತಕ ಸೆಲೆಬ್ರೆಟ್ ಮಾಡಿದ ಸುಹಾನ ಖಾನ್
ಕೊನೆಗೆ ಅಲಿಗಢದ ಪ್ರತಿಷ್ಠಿತ ಶಾಲೆಯೊಂದು ಶಾಲಾ ವಿಶ್ವಕಪ್ ಆಯೋಜಿಸಿದಾಗ ಅದರಲ್ಲಿ ಪಾಲ್ಗೊಂಡಿದ್ದ ರಿಂಕು, ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿ ಬೈಕ್‌ವೊಂದನ್ನು ಬಹುಮಾನವಾಗಿ ಪಡೆದರು. ಆ ಟೂರ್ನಿಯಲ್ಲಿ ರಿಂಕು ಆಟವನ್ನು ನೋಡಿದ್ದ ಖಾನ್‌ಚಾಂದ್‌ಗೆ ತಮ್ಮ ಮಗನ ಪ್ರತಿಭೆಯ ಅರಿವಾಗಿದ್ದೇ ಆಗ. ಆ ನಂತರ ರಿಂಕು ಅವರ ಕನಸಿಗೆ ಖಾನ್‌ಚಾಂದ್ ಅಡ್ಡಿಯಾಗಲಿಲ್ಲ.
ಕ್ರಿಕೆಟ್ ಹಾದಿ ಸುಗಮವಾಗಿರಲಿಲ್ಲ:
2 ಬಾರಿ ಉತ್ತರ ಪ್ರದೇಶ ಅಂಡರ್-16 ಟ್ರಯಲ್ಸ್‌ನಲ್ಲಿ ಕಡೆಗಣಿಸಲ್ಪಟ್ಟಿದ್ದ ರಿಂಕು, ಕ್ರಿಕೆಟ್ ಬಿಟ್ಟುಬಿಡುವ ಬಗ್ಗೆಯೂ ಚಿಂತಿಸಿದ್ದರಂತೆ. ಆದರೆ 2012ರ ವಿಜಯ್ ಮರ್ಚೆಂಟ್ ಟ್ರೋಫಿಯ ಪಂದ್ಯವೊಂದರಲ್ಲಿ 154 ರನ್ ಸಿಡಿಸಿದ ಬಳಿಕ ರಿಂಕು ಆತ್ಮವಿಶ್ವಾಸ ವೃದ್ಧಿಸಿತು. ಕೆಲವೇ ವರ್ಷಗಳಲ್ಲಿ ಅವರು ಯು.ಪಿ. ಅಂಡರ್-19 ತಂಡಕ್ಕೆ ಕಾಲಿಟ್ಟು ಆ ಬಳಿಕ ನೇರವಾಗಿ ಯು.ಪಿ. ಏಕದಿನ ತಂಡಕ್ಕೆ ಆಯ್ಕೆಯಾದರು. ಅಲ್ಲಿಂದಾಚೆಗೆ ಹಿಂದಿರುಗಿ ನೋಡಿಲ್ಲ.
