ಕರ್ನಾಟಕ ತಂಡದ ಆಟಗಾರ ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ಟೆವಾಟಿಯಾ ಕೊನೇ ಹಂತದಲ್ಲಿ ಅಬ್ಬರದ ಆಟವಾಡಿದ್ದರಿಂದ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಅಹಮದಾಬಾದ್ (ಏ.25): ಪಂದ್ಯದ ಕೊನೆಯ ಹಂತದಲ್ಲಿ ಕರ್ನಾಟಕದ ಆಟಗಾರ ಅಭಿನವ್ ಮನೋಹರ್, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ಟೆವಾಟಿಯಾ ಅವರ ಸ್ಫೋಟಕ ಇನ್ನಿಂಗ್ಸ್‌ಗಳ ಬೆನ್ನ್ಏರಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ 2023ರ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವ ಮೂಲಕ ತನ್ನ ಬೌಲಿಂಗ್ ಶಕ್ತಿಯನ್ನು ಪರಿಚಯ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತನ್ನ ಬ್ಯಾಟಿಂಗ್ ಪ್ರತಾಪವನ್ನು ತೋರಿತು. ಈ ಮೂವರ ಆರ್ಭಟದೊಂದಿಗೆ ಆರಂಭಿಕ ಆಟಗಾರ ಶುಭಮನ್ ಗಿಲ್ (56 ರನ್, 34 ಎಸೆತ, 7 ಬೌಂಡರಿ, 1 ಸಿಕ್ಸರ್) ಆಡಿದ ಆಕರ್ಷಕ ಇನ್ನಿಂಗ್ಸ್ ಕೂಡ ಗುಜರಾತ್ ಟೈಟಾನ್ಸ್‌ಗೆ ನೆರವಾಯಿತು. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಬೌಲಿಂಗ್ ಎದುರು ಗುಜರಾತ್ ಟೈಟಾನ್ಸ್ 6 ವಿಕಟ್‌ಗೆ 207 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಇದು ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಈವರೆಗಿನ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ ಕೆಕೆಆರ್ ವಿರುದ್ಧ ಇದೇ ವರ್ಷ 4 ವಿಕೆಟ್‌ಗೆ 204 ರನ್ ಬಾರಿಸಿದ್ದು ತಂಡದ ಐಪಿಎಲ್‌ನ ಗರಿಷ್ಠ ಮೊತ್ತವಾಗಿತ್ತು.
13ನೇ ಓವರ್‌ನ ವೇಳೆಗೆ 4 ವಿಕೆಟ್‌ಗೆ 101 ರನ್ ಪೇರಿಸಿದ್ದ ಗುಜರಾತ್ ಟೈಟಾನ್ಸ್ ತಂಡ 200 ರನ್ ದಾಟುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಅಭಿನವ್ ಮನೋಹರ್ (42ರನ್, 21 ಎಸೆತ, 3 ಬೌಂಡರಿ, 3 ಸಿಕ್ಸರ್), ಡೇವಿಡ್ ಮಿಲ್ಲರ್ (46 ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ರಾಹುಲ್ ಟೆವಾಟಿಯಾ (20ರನ್, 5 ಎಸೆತ, 3 ಸಿಕ್ಸರ್) ಸಾಹಸದಿಂದ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶ ಕಂಡಿತು.
