Asianet Suvarna News Asianet Suvarna News

IPL ಟೂರ್ನಿಯಲ್ಲೂ ಇಂಪ್ಯಾಕ್ಟ್ ಆಟಗಾರ ವ್ಯವಸ್ಥೆ ಅಳವಡಿಕೆ; ರೋಚಕತೆ ಹೆಚ್ಚಿಸಲು ಮಾಸ್ಟರ್‌ ಪ್ಲಾನ್..!

ಐಪಿಎಲ್‌ ರೋಚಕತೆ ಹೆಚ್ಚಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್
2023ರ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ರೂಲ್ಸ್ ಅಳವಡಿಕೆ
ಪ್ರಾಯೋಗಿಕವಾಗಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಈ ನಿಯಮ ಜಾರಿಯಾಗಿತ್ತು

IPL 2023 Impact Player rule how does it work All Cricket fans needs to know kvn
Author
First Published Dec 3, 2022, 10:36 AM IST

ನವದೆಹಲಿ(ಡಿ.03): ಟಿ20 ಕ್ರಿಕೆಟ್‌ನ ರೋಚಕತೆ ಹೆಚ್ಚಿಸುವ ಸಲುವಾಗಿ ಬಿಸಿಸಿಐ, 2023ರ ಆವೃತ್ತಿಯಿಂದ ಐಪಿಎಲ್‌ನಲ್ಲೂ ‘ಇಂಪ್ಯಾಕ್ಟ್ ಆಟಗಾರ’ ವ್ಯವಸ್ಥೆಯನ್ನು ಅಳವಡಿಸಲಿದೆ. ಪ್ರಾಯೋಗಿಕವಾಗಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಈ ನಿಯಮ ಜಾರಿ ಮಾಡಲಾಗಿತ್ತು. ಇದು ಯಶಸ್ವಿಯಾದ ಕಾರಣ ಐಪಿಎಲ್‌ನಲ್ಲೂ ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ.

ಏನಿದು ಇಂಪ್ಯಾಕ್ಟ್ ಆಟಗಾರ ನಿಯಮ?

ಟಿ20 ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮತ್ತೊಬ್ಬ ಆಟಗಾರ ಪಂದ್ಯದ ನಡುವೆಯೇ ಕಣಕ್ಕಿಳಿಯಬಹುದು. ಟಾಸ್‌ ವೇಳೆ ಆಡುವ ಹನ್ನೊಂದರ ಪಟ್ಟಿಯೊಂದಿಗೆ ನಾಲ್ವರು ಬದಲಿ ಆಟಗಾರನ ಹೆಸರನ್ನೂ ತಂಡಗಳು ನೀಡಬೇಕು. ಈ ನಾಲ್ವರ ಪೈಕಿ ಒಬ್ಬ ಆಟಗಾರ ಇನ್ನಿಂಗ್‌್ಸನ 14ನೇ ಓವರ್‌ನ ಮುಕ್ತಾಯದ ಮೊದಲು ಮತ್ತೊಬ್ಬ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮೈದಾನಕ್ಕಿಳಿಬಹುದು. ಔಟಾಗಿರುವ ಬ್ಯಾಟರ್‌ ಬದಲೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿಯಬಹುದು. ಆದರೆ ತಂಡವು ಕೇವಲ 11 ಬ್ಯಾಟರ್‌ಗಳನ್ನಷ್ಟೇ ಬಳಸಬೇಕು. ಇನ್ನು ಕೆಲ ಓವರ್‌ಗಳನ್ನು ಬೌಲ್‌ ಮಾಡಿರುವ ಬೌಲರ್‌ನ ಬದಲಿಗೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿದು ಪೂರ್ತಿ 4 ಓವರ್‌ ಎಸೆಯಬಹುದು.

ಐಪಿಎಲ್‌ಗೂ ವಿದಾಯ ಘೋಷಿಸಿದ CSK ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ..!

ಇಂಪ್ಯಾಕ್ಟ್ ಪ್ಲೇಯರ್‌ ಒಂದು ಓವರ್‌ನ ಕೊನೆಯಲ್ಲಿ ಮಾತ್ರ ಕಣಕ್ಕಿಳಿಯಬಹುದು. ಆದರೆ ಎರಡು ಸನ್ನಿವೇಶಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ಬ್ಯಾಟ್ಸ್‌ಮನ್‌ ಔಟಾದಾಗ ಇಂಪ್ಯಾಕ್ಟ್ ಆಟಗಾರನನ್ನು ಕಣಕ್ಕಿಳಿಸಲು ತಂಡಗಳಿಗೆ ಅವಕಾಶವಿರಲಿದೆ. ಇನ್ನು ಆಟಗಾರ ಗಾಯಗೊಂಡು ಮೈದಾನದಿಂದ ಹೊರನಡೆದರೆ ಆ ಸಂದರ್ಭದಲ್ಲಿ ಇಂಪ್ಯಾಕ್ಟ್ ಆಟಗಾರ ಮೈದಾನ ಪ್ರವೇಶಿಸಬಹುದು. ಒಮ್ಮೆ ಇಂಪ್ಯಾಕ್ಟ್ ಆಟಗಾರನಿಗೆ ಜಾಗ ಬಿಟ್ಟುಕೊಟ್ಟು ಮೈದಾನ ತೊರೆಯುವ ಆಟಗಾರ ಮತ್ತೆ ಕಣಕ್ಕಿಳಿಯುವಂತಿಲ್ಲ. ಬದಲಿ ಫೀಲ್ಡರ್‌ ಆಗಿಯೂ ಅವರಿಗೆ ಕಣಕ್ಕಿಳಿಯಲು ಅವಕಾಶವಿರುವುದಿಲ್ಲ.

ಪಂದ್ಯದ ಮೇಲೆ ಪರಿಣಾಮವೇನು?

ಈ ನಿಯಮವು ಟಾಸ್‌ ಒಂದು ತಂಡಕ್ಕೆ ಲಾಭವಾಗುವುದನ್ನು ತಪ್ಪಿಸಬಹುದು. ಉದಾಹರಣೆಗೆ ತಂಡವೊಂದು ಟಾಸ್‌ ಸೋತು 2ನೇ ಇನ್ನಿಂಗ್‌್ಸನಲ್ಲಿ ಬೌಲ್‌ ಮಾಡಬೇಕಾದಾಗ ಇಬ್ಬನಿ ಬೀಳುತ್ತಿದ್ದರೆ ಒಬ್ಬ ಹೆಚ್ಚುವರಿ ತಜ್ಞ ಬೌಲರನ್ನು ಕಣಕ್ಕಿಳಿಸಿ ತನ್ನ ಬೌಲಿಂಗ್‌ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಪಿಚ್‌ ಬ್ಯಾಟರ್‌ಗಳಿಗೆ ನೆರವು ನೀಡುತ್ತಿದ್ದರೆ ಒಬ್ಬ ಹೆಚ್ಚುವರಿ ಬ್ಯಾಟರ್‌ ಅನ್ನು ಆಡಿಸಿ ಲಾಭ ಪಡೆಯಬಹುದು. ಇದಲ್ಲದೇ ತಮ್ಮ ತಾರಾ ಆಟಗಾರರ ಮೇಲಿನ ಕೆಲಸದ ಒತ್ತಡವನ್ನು ನಿರ್ವಹಿಸಲು ಸಹ ಈ ನಿಯಮ ಸಹಕಾರಿಯಾಗಲಿದೆ. ಆಟಗಾರರು ಗಾಯಗೊಳ್ಳುವುದನ್ನೂ ತಪ್ಪಿಸಬಹುದು.

ಏನು ವ್ಯತ್ಯಾಸ?

ಬದಲಿ ಆಟಗಾರ ಮೈದಾನಕ್ಕಿಳಿಯುವ ನಿಯಮ ಕ್ರಿಕೆಟ್‌ನಲ್ಲಿ ಹೊಸದಲ್ಲ. 2005-06ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ‘ಸೂಪರ್‌-ಸಬ್‌’ ಎನ್ನುವ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಆ ನಿಯಮದ ಪ್ರಕಾರ ಒಬ್ಬ ಆಟಗಾರ ಮತ್ತೊಬ್ಬ ಆಟಗಾರನ ಬದಲು ಮೈದಾನಕ್ಕಿಳಿಯಬಹುದು. ಆದರೆ ಆಡುವ ಹನ್ನೊಂದರಲ್ಲಿದ್ದ ಆಟಗಾರ ಔಟಾಗಿದ್ದರೆ ಹೊಸದಾಗಿ ಮೈದಾನಕ್ಕಿಳಿಯುವ ಆಟಗಾರ ಬ್ಯಾಟ್‌ ಮಾಡುವಂತ್ತಿಲ್ಲ. ಇನ್ನು ಬೌಲರ್‌ನ ಕೋಟಾದಲ್ಲಿ ಎಷ್ಟು ಬಾಕಿ ಇರುತ್ತದೆಯೋ ಅಷ್ಟುಓವರ್‌ಗಳನ್ನು ಮಾತ್ರ ಎಸೆಯಬಹುದಾಗಿತ್ತು.

ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಟೂರ್ನಿಯಲ್ಲಿ ‘ಎಕ್ಸ್‌-ಫ್ಯಾಕ್ಟರ್‌’ ಎನ್ನುವ ನಿಯಮವಿದೆ. ಪ್ರತಿ ಇನ್ನಿಂಗ್‌್ಸನ ಮಧ್ಯಭಾಗ ಎಂದರೆ 10 ಓವರ್‌ಗಳ ಬಳಿಕ ಒಬ್ಬ ಆಟಗಾರ ಆಡುವ ಹನ್ನೊಂದರಲ್ಲಿರುವ ಆಟಗಾರನ ಬದಲು ಮೈದಾನಕ್ಕಿಳಿಬಹುದು. ಆದರೆ ಹೊರಹೋಗುವ ಆಟಗಾರ ಬ್ಯಾಟ್‌ ಮಾಡಿರಬಾರದು. ಜೊತೆಗೆ 1 ಓವರ್‌ಗಿಂತ ಹೆಚ್ಚು ಬೌಲ್‌ ಮಾಡಿರಬಾರದು.

Follow Us:
Download App:
  • android
  • ios