ಲಖನೌ ಎದುರು ಸಾಧಾರಣ ಗುರಿ ಕಲೆಹಾಕಿದ ಗುಜರಾತ್ ಟೈಟಾನ್ಸ್6 ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದ ಹಾಲಿ ಚಾಂಪಿಯನ್‌ಸಮಯೋಚಿತ ಅರ್ಧಶತಕ ಚಚ್ಚಿದ ಹಾರ್ದಿಕ್ ಪಾಂಡ್ಯ
ಲಖನೌ(ಏ.22): ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ ಹೊರತಾಗಿಯೂ, ಲಖನೌ ಸೂಪರ್ ಜೈಂಟ್ಸ್ ಬೌಲರ್‌ಗಳ ಶಿಸ್ತುಬದ್ದ ದಾಳಿಯಿಂದಾಗಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಕೇವಲ 135 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತಂಡವು ಗೆಲ್ಲಲು ಸಾಧಾರಣ ಗುರಿ ಪಡೆದಿದೆ. ಲಖನೌ ಪರ ಮಾರ್ಕಸ್ ಸ್ಟೋನಿಸ್ ಹಾಗೂ ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಎರಡನೇ ಓವರ್‌ನಲ್ಲೇ ತಾರಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಗಿಲ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಎಚ್ಚರಿಕೆಯ ಆಟವಾಡುವ ಮೂಲಕ ಆರಂಭಿಕ ಆಘಾತದಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಪಾರು ಮಾಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 68 ರನ್ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲಿಗೆ ರಕ್ಷಣಾತ್ಮಕ ಆಟವಾಡಿದ ಸಾಹ, ಪಿಚ್‌ಗೆ ಹೊಂದಿಕ್ಕೊಳ್ಳುತ್ತಿದ್ದಂತೆಯೇ ಸ್ಪೋಟಕ ಬ್ಯಾಟಿಂಗ್ ನಡೆಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಸಾಹ ಅಂತಿಮವಾಗಿ 37 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 47 ರನ್ ಬಾರಿಸಿ ಕೃನಾಲ್ ಪಾಂಡ್ಯಗೆ ಎರಡನೇ ಬಲಿಯಾದರು.
IPL 2023: ಲಖನೌ ಎದುರು ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆ
ಹಾರ್ದಿಕ್ ಪಾಂಡ್ಯ ಭರ್ಜರಿ ಅರ್ಧಶತಕ: ವೃದ್ದಿಮಾನ್ ಸಾಹ ಜತೆಗೆ ಜವಾಬ್ದಾರಿಯುತ ಅರ್ಧಶತಕದ ಜತೆಯಾಟವಾಡಿದ ಹಾರ್ದಿಕ್ ಪಾಂಡ್ಯ, ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಕೇವಲ 100 ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಪಾಂಡ್ಯ 44 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 18ನೇ ಓವರ್ ಬೌಲಿಂಗ್ ಮಾಡಿದ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಯತ್ನ ನಡೆಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 50 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 66 ರನ್ ಬಾರಿಸಿ ಮಾರ್ಕಸ್ ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಡೆತ್ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿರುವ ಡೇವಿಡ್ ಮಿಲ್ಲರ್ ಬರೋಬ್ಬರಿ 12 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ರನ್ ಗಳಿಸಲು ಪರದಾಡಿದರು. ಕನ್ನಡಿಗ ಅಭಿನವ್ ಮನೋಹರ್ 5 ಎಸೆತಗಳನ್ನು ಎದುರಿಸಿ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಜಯ್ ಶಂಕರ್ ಬ್ಯಾಟಿಂಗ್ ಕೇವಲ 10 ರನ್‌ಗೆ ಸೀಮಿತವಾಯಿತು.
