* 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಗುಜರಾತ್ ಟೈಟಾನ್ಸ್-ಪಂಜಾಬ್ ಕಿಂಗ್ಸ್ ಫೈಟ್* ಉಭಯ ತಂಡಗಳೂ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ತಲಾ 4 ಅಂಕ ಸಂಪಾದಿಸಿವೆ* ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜು
ಮೊಹಾಲಿ(ಏ.13): ರಿಂಕು ಸಿಂಗ್‌ರ ಸಿಕ್ಸರ್ ಸುರಿಮಳೆಯಿಂದಾಗಿ ಕೋಲ್ಕತಾ ವಿರುದ್ಧ ಮುಗ್ಗರಿಸಿದ್ದ ಗುಜರಾತ್ ಜೈಂಟ್ಸ್ ಆ ಸೋಲಿನ ಆಘಾತದಿಂದ ಹೊರಬರಲು ಕಾಯುತ್ತಿದ್ದು, ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಸೆಣಸಾಟದಲ್ಲಿ ಜಯಗಳಿಸುವ ನಿರೀಕ್ಷೆಯಲ್ಲಿದೆ. ಅತ್ತ ಧವನ್ ನಾಯಕತ್ವದ ಪಂಜಾಬ್ ತಂಡ ಕೂಡಾ ತನ್ನ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋತಿದ್ದು, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ. ಉಭಯ ತಂಡಗಳೂ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ತಲಾ 4 ಅಂಕ ಸಂಪಾದಿಸಿವೆ.
ಹಾಲಿ ಚಾಂಪಿಯನ್ ಗುಜರಾತ್ನಲ್ಲಿ ಸಮರ್ಥ, ತಜ್ಞ ಟಿ20 ಆಟಗಾರರಿದ್ದು, ಯಾವುದೇ ಎದುರಾಳಿಯನ್ನು ಸೋಲಿಸುವ ಶಕ್ತಿ ಹೊಂದಿದೆ. ಯಾವುದೇ ಆಟಗಾರನ ಮೇಲೆ ಹೆಚ್ಚಾಗಿ ಅವಲಂಬಿಸದೆ ತಂಡವಾಗಿ ಆಡುವುದು ಗುಜರಾತ್ನ ಯಶಸ್ಸಿನ ಹಿಂದಿರುವ ರಹಸ್ಯ. ಶುಭ್‌ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದು, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಜೊತೆಗೆ ರಶೀದ್ ಖಾನ್, ಹಾರ್ದಿಕ್ ಕೂಡಾ ಅಬ್ಬರಿಸಿದರೆ ಎದುರಾಳಿಗಳಿಗೆ ಉಳಿಗಾಲವಿಲ್ಲ. ಮೊಹಮದ್ ಶಮಿ ಮುನ್ನಡೆಸಲಿರುವ ವೇಗದ ಬೌಲಿಂಗ್ ಪಡೆಯಲ್ಲಿ ಅಲ್ಜಾರಿ ಜೋಸೆಫ್ ಕೂಡಾ ಇದ್ದು, ಡೆತ್ ಓವರ್‌ಗಳಲ್ಲಿ ಎದುರಿಸುವುದು ಪಂಜಾಬ್ಗೆ ಸವಾಲಾಗಬಹುದು. ಕಳೆದ ಪಂದ್ಯದಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಬಿಟ್ಟುಕೊಟ್ಟ ಹೊರತಾಗಿಯೂ ಯಶ್ ಧಯಾಳ್ಗೆ ಮತ್ತೊಂದು ಅವಕಾಶ ಸಿಗಬಹುದು.
ಮತ್ತೊಂದೆಡೆ ಶಿಖರ್ ಧವನ್ರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಪಂಜಾಬ್ ಈ ಪಂದ್ಯದಲ್ಲಿ ಹಿಂದಿನ ಪಂದ್ಯದ ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಐಪಿಎಲ್ ಹರಾಜಿನ ದುಬಾರಿ ಆಟಗಾರ ಸ್ಯಾಮ್ ಕರ್ರನ್ ಇನ್ನಷ್ಟೇ ನೈಜ ಆಟ ಪ್ರದರ್ಶಿಸಬೇಕಿದ್ದು, ಲಿವಿಂಗ್ಸ್ಟೋನ್ ತಂಡ ಸೇರಿದ್ದರೂ ಈ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ. ಪ್ರಭ್ಸಿಮ್ರಾನ್, ಜಿತೇಶ್ ಶರ್ಮಾ ಜೊತೆ ಶಾರೂಖ್ ಖಾನ್ ಮಿಂಚಿದರಷ್ಟೇ ತಂಡಕ್ಕೆ ಗೆಲುವು ಸಿಗಬಹುದು. ಇದೇ ವೇಳೆ ರಬಾಡ ಸೇರ್ಪಡೆ ಬೌಲಿಂಗ್ ವಿಭಾಗಕ್ಕೆ ಬಲ ಒದಗಿಸಿದ್ದು, ಅಶ್‌ರ್‍ದೀಪ್ ಸಿಂಗ್ ಹಾಗೂ ನೇಥನ್ ಎಲ್ಲಿಸ್ ಎದುರಾಳಿಗಳನ್ನು ಕಾಡಲು ಸಜ್ಜಾಗಿದ್ದಾರೆ.
IPL 2023: ಬರೋಬ್ಬರಿ 15 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಮಣಿಸಿದ ರಾಜಸ್ಥಾನ!
ಒಟ್ಟು ಮುಖಾಮುಖಿ: 02
ಗುಜರಾತ್: 01
ಪಂಜಾಬ್: 01
ಸಂಭವನೀಯ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ ಸಾಹ, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಜೋಶ್ವಾ ಲಿಟ್ಲ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರೂಖ್ ಖಾನ್, ಹಪ್ರೀರ್ತ್ ಬ್ರಾರ್, ರಾಹುಲ್ ಚಹರ್, ಅಶ್‌ರ್‍ದೀಪ್, ರಬಾಡ
ಪಂದ್ಯ: ಸಂಜೆ 7.30ರಿಂದ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಮೊಹಾಲಿ ಕ್ರೀಡಾಂಗಣದ ಪಿಚ್ ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡಿದ ಉದಾಹರಣೆ ಇದ್ದು, ಮತ್ತೊಮ್ಮೆ ರನ್ ಮಳೆ ಹರಿಯುವ ನಿರೀಕ್ಷೆ ಇದೆ. ವೇಗಿಗಳಿಗೂ ಈ ಪಿಚ್ ಅನುಕೂಲವಾಗುವ ಸಾಧ್ಯತೆ ಹೆಚ್ಚು. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.
