IPL 2023 ಅಭಿಮಾನಿಗಳಿಗೆ ನಿರಾಸೆ, ಗುಜರಾತ್ vs ಚೆನ್ನೈ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!
ಐಪಿಎಲ್ 2023 ಟೂರ್ನಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಟಾಸ್ ಆರಂಭಕ್ಕೂ ಮೊದಲೇ ಮಳೆ ಆರಂಭಗೊಂಡಿದೆ. ಗುಡುಗು, ಗಾಳಿ ಸಹಿತ ಮಳೆ ಆರಂಭಗೊಂಡಿದೆ. ಹೀಗಾಗಿ ಮಹತ್ವದ ಪಂದ್ಯದ ಟಾಸ್ ವಿಳಂಬವಾಗಿದೆ.
ಅಹಮ್ಮದಾಬಾದ್(ಮೇ.28): ಐಪಿಎಲ್ 2023 ಟೂರ್ನಿ ಟ್ರೋಫಿ ಯಾರಿಗೆ? ಈ ಕುತೂಹಲಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತಿದ್ದಾರೆ. ಫೈನಲ್ ಹೋರಾಟಕ್ಕೆ ಚನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಸಜ್ಜಾಗಿದೆ.ಆದರೆ ಪಂದ್ಯದ ಟಾಸ್ ವಿಳಂಬವಾಗಿದೆ. ಗುಡುಗು, ಗಾಳಿ ಸಹಿತ ಮಳೆ ಆರಂಭಗೊಂಡಿದೆ. ಇತ್ತ ಕ್ರೀಡಾಂಗಣದಲ್ಲಿ ಹಾಜರಾಗಿರುವ ಅಭಿಮಾನಿಗಳು ಧೋನಿ ಧೋನಿ ಎಂದು ಘೋಷಣೆ ಮೊಳಗಿಸಿದ್ದಾರೆ.
ಮಳೆಯಿಂದ ಇಂದಿನ ಪಂದ್ಯ ರದ್ದಾದರೆ ರಿಸರ್ವ್ ಡೇಯಲ್ಲಿ ಮತ್ತೆ ಪಂದ್ಯ ಆಯೋಜಿಸಲಾಗುತ್ತದೆ. ಸೋಮವಾರ(ಮೇ.29)ರಿಸರ್ವ್ ಡೇ ಎಂದು ಬಿಸಿಸಿಐ ಘೋಷಿಸಿದೆ. ಆದರೆ ಇಂದು ಮಳೆಯಿಂದ ಕನಿಷ್ಠ 5 ಓವರ್ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ನಾಳೆ ಮತ್ತೆ ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಮಳೆ ಕಾರಣದಿಂದ 9 ಗಂಟೆ ಬಳಿಕ ಪಂದ್ಯ ಆರಂಭಗೊಂಡರೆ ಓವರ್ ಕಡಿತ ಆರಂಭಗೊಳ್ಳಲಿದೆ.
IPL 2023: ಹಲವು ಅಪರೂಪದ ದಾಖಲೆಗೆ ಸಾಕ್ಷಿಯಾಗುತ್ತಾ ಐಪಿಎಲ್ ಫೈನಲ್..?
2011ರ ಬಳಿಕ ನಡೆದ 12 ಐಪಿಎಲ್ ಫೈನಲ್ ಪಂದ್ಯದಲ್ಲಿ 9 ಬಾರಿ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ತಂಡ ಟ್ರೋಫಿ ಗೆದ್ದುಕೊಂಡಿದೆ. ಇದೇ ಸಂಪ್ರದಾಯ ಮುಂದುವರಿದರೆ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲಲಿದೆ. ಆದರೆ ಪ್ರಸಕ್ತ ಸರಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಿಂತ ಗುಜರಾತ್ ಟೈಟಾನ್ಸ್ ಬಲಿಷ್ಠ ತಂಡವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ಹಿಂದಿನ 4 ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ 3 ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ಅಂದರೆ ಮೊನ್ನೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ.
ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಮಣಿಸಿ ನೇರವಾಗಿ ಫೈನಲ್ ಪ್ರವೇಶಿಸಿತು. ಆದರೆ ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆ ಹಾಗೇ ಉಳಿದಿದೆ. ಮೊಯಿನ್ ಆಲಿ, ಅಂಬಾಟಿ ರಾಯುಡು ಹಾಗೂ ನಾಯಕ ಧೋನಿ ಬ್ಯಾಟಿಂಗ್ ಕೊಡುಗೆ ಅಷ್ಟಕಷ್ಟೆ. ಟಾಪ್ ಆರ್ಡರ್ ವಿಕೆಟ್ ದಿಢೀರ್ ಪತನಗೊಂಡರೆ ಚೆನ್ನೈ ತಂಡದ ಮೇಲೆ ಒತ್ತಡ ಹೆಚ್ಚಾಗಲಿದೆ. ಫೈನಲ್ ಪಂದ್ಯದ ಒತ್ತಡವನ್ನು ನಿಭಾಯಿಸುವ ಬೌಲರ್ ಸಂಖ್ಯೆಯೂ ಚೆನ್ನೈ ಬಳಿ ಕಡಿಮೆ ಇದೆ. ರವೀಂದ್ರ ಜಡೇಜಾ ಹಾಗೂ ದೀಪಕ್ ಚಹಾರ್ ಫೈನಲ್ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.
IPL 2023 ಇತಿಹಾಸ ಹೇಳುತ್ತಿದೆ ಸಾಕ್ಷಿ, ಈ ಬಾರಿ ಸಿಎಸ್‌ಕೆಗೆ ಟ್ರೋಫಿ!
ಗುಜರಾತ್ ತಂಡದ ಬ್ಯಾಟಿಂಗ್ ಅದ್ಭುತವಾಗಿದೆ. ಸರಿಸುಮಾರು 8ನೇ ಕ್ರಮಾಂಕದವರೆಗೆ ಮ್ಯಾಚ್ ವಿನ್ನರ್ ಇದ್ದಾರೆ. ಶುಭಮನ್ ಗಿಲ್ ಆರೇಂಜ್ ಕ್ಯಾಪ್ ಧರಿಸಿದ್ದು, 851 ರನ್ ಸಿಡಿಸಿದ್ದಾರೆ. ಸಾಯಿ ಸುದರ್ಶನ್, ವಿಜಯ್ ಶಂಕರ್ ಉತ್ತಮ ಕಾಣಿಕೆ ನೀಡಿದ್ದಾರೆ. ಯಾವುದೇ ಹಂತದಲ್ಲೂ ಪಂದ್ಯವನ್ನು ತಿರುಗಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರೆ. ಇನ್ನು ರಶೀದ್ ಖಾನ್ ಸಿಕ್ಸರ್ ಅಬ್ಬರ ಹಾಗೂ ಸ್ಫೋಟಕ ಬ್ಯಾಟಿಂಗ್ ಹಲವು ಪಂದ್ಯಗಳಲ್ಲಿ ಮೂಡಿ ಬಂದಿದೆ. ಹೀಗಾಗಿ ಸರಿಸುಮಾರು 8 ಬ್ಯಾಟ್ಸ್‌ಮನ್ ಗುಜರಾತ್ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ. ಇದರ ಜೊತೆಗೆ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್ ದಾಳಿ ಕೂಡ ಗುಜರಾತ್‌ಗೆ ನೆರವಾಗಲಿದೆ.