ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್‌ಡೆಲ್ಲಿಗೆ ತವರಿನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸವಾಲುಗುಜರಾತ್ ಸವಾಲು ಮೆಟ್ಟಿ ನಿಲ್ಲುತ್ತಾ ಡೇವಿಡ್ ವಾರ್ನರ್ ಪಡೆ?
ನವದೆಹಲಿ(ಏ.04): ಚೆನ್ನೈ ವಿರುದ್ಧದ ಗೆಲುವಿನೊಂದಿಗೆ 16ನೇ ಆವೃತ್ತಿ ಐಪಿಎಲ್ಗೆ ಕಾಲಿಟ್ಟಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಮತ್ತೊಂದು ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಡೆಲ್ಲಿ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಹೀನಾಯ ಸೋಲಿನ ಆಘಾತದಿಂದ ಹೊರಬಂದು ಜಯದ ಖಾತೆ ತೆರೆಯುವ ಗುರಿ ಇಟ್ಟುಕೊಂಡಿದೆ.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಡೆಲ್ಲಿಗೆ ಅನುಭವಿ ಭಾರತೀಯ ವೇಗಿಗಳ ಅನುಪಸ್ಥಿತಿಯೂ ಕಾಡುತ್ತಿದೆ. ದಕ್ಷಿಣ ಆಫ್ರಿಕಾದ ಏನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ ತಂಡಕ್ಕೆ ಸೇರಿಸಿಕೊಂಡಿದ್ದರೂ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ವೇಗಿಗಳಾದ ಖಲೀಲ್ ಅಹ್ಮದ್, ಚೇತನ್ ಸಕಾರಿಯಾ, ಮುಕೇಶ್ ಕುಮಾರ್ ನಿರೀಕ್ಷಿತ ಪ್ರದರ್ಶನ ನೀಡದ ಹೊರತು ತಂಡಕ್ಕೆ ಗೆಲುವು ಕಷ್ಟವಿದೆ. ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಡೇವಿಡ್ ವಾರ್ನರ್ಗೆ ಸೂಕ್ತ ಬೆಂಬಲದ ಅಗತ್ಯವಿದ್ದು, ಮಿಚೆಲ್ ಮಾರ್ಷ್ ಆಲ್ರೌಂಡ್ ಪ್ರದರ್ಶನ ಟ್ರಂಪ್ ಕಾರ್ಡ್ ಎನಿಸಬಹುದು. ಯುವ ಬ್ಯಾಟರ್ಗಳಾದ ಪೃಥ್ವಿ ಶಾ, ಸರ್ಫರಾಜ್ ಖಾನ್ ಜವಾಬ್ದಾರಿಯುತ ಆಟವಾಡಬೇಕಿದೆ. ಮನೀಶ್ ಪಾಂಡೆ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದೆಡೆ ಚೆನ್ನೈ ವಿರುದ್ಧದ ಅಭೂತಪೂರ್ವ ಪ್ರದರ್ಶನದ ಹುಮ್ಮಸ್ಸಿನಲ್ಲಿರುವ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಚಾಂಪಿಯನ್ ಆಟ ಪ್ರದರ್ಶಿಸಲು ಕಾಯುತ್ತಿದೆ. ಶುಭ್‌ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದು, ರಶೀದ್ ಖಾನ್ ತಂಡದ ಟ್ರಂಪ್‌ಕಾರ್ಡ್ ಎನಿಸಿದ್ದಾರೆ. ಬೌಲಿಂಗ್ ಪಡೆಯನ್ನು ಮೊಹಮದ್ ಶಮಿ ಮುನ್ನಡೆಸಲಿದ್ದು, ಅಲ್ಜಾರಿ ಜೋಸೆಫ್‌ರನ್ನು ಡೆತ್ ಓವರ್‌ಗಳಲ್ಲಿ ಎದುರಿಸುವುದು ಡೆಲ್ಲಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.
ಡೇವಿಡ್ ಮಿಲ್ಲರ್ ತಂಡ ಸೇರ್ಪಡೆಗೊಂಡಿದ್ದರೂ ಈ ಪಂದ್ಯಕ್ಕೆ ಲಭ್ಯವಿರುವ ಬಗ್ಗೆ ಖಚಿತತೆಯಿಲ್ಲ. ಕೊನೆ ಕ್ಷಣದಲ್ಲಿ ಅಬ್ಬರಿಸಿ ಹಲವು ಪಂದ್ಯಗಳನ್ನು ಗೆಲ್ಲಿಸಿರುವ ರಾಹುಲ್ ತೆವಾಟಿಯಾ ಉಪಸ್ಥಿತಿ ತಂಡಕ್ಕೆ ಪ್ಲಸ್ ಪಾಯಿಂಟ್. ಹಾರ್ದಿಕ್ ಪಾಂಡ್ಯ ನಾಯಕತ್ವದ ಜೊತೆ ಉತ್ತಮ ಪ್ರದರ್ಶನ ತೋರಬೇಕಾದ ಒತ್ತಡದಲ್ಲಿದ್ದು, ಕೇನ್ ವಿಲಿಯಮ್ಸನ್ ಬದಲು ಮ್ಯಾಥ್ಯೂ ವೇಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಬಹುದು.
IPL 2023: ಜಯದ ಖಾತೆ ತೆರೆದ ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಹೋರಾಟ ವ್ಯರ್ಥ
ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೇವಲ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಟೈಟಾನ್ಸ್ ಎದುರು ಗೆದ್ದು, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್, ವೃದ್ದಿಮಾನ್ ಸಾಹ, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ ಲಿಟ್ಲ್, ಯಶ್ ದಯಾಳ್, ಅಲ್ಜಾರಿ ಜೋಸೆಫ್.
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೇ ರುಸ್ಸೌ, ಸರ್ಫರಾಜ್ ಖಾನ್, ರೋವ್ಮನ್ ಪೋವೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್, ಮುಕೇಶ್ ಚೌಧರಿ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಮೊದಲು ಬ್ಯಾಟ್ ಮಾಡಿದ ತಂಡ 170+ ರನ್ ಕಲೆ ಹಾಕಿದರೆ ಚೇಸಿಂಗ್ ಕಷ್ಟವಾಗಬಹುದು. ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ಕೆ ಮಾಡಿದರೆ ಅಚ್ಚರಿಯಿಲ್ಲ.
