ಗುಜರಾತ್ ಟೈಟಾನ್ಸ್ ಮಾರಕ ದಾಳಿ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ದಿಟ್ಟ ಹೋರಾಟ ನೀಡಿದೆ. ವಾರ್ನರ್, ಸರ್ಫರಾಜ್ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಇದೀಗ ಗುಜರಾತ್ ಟೈಟಾನ್ಸ್‌ಗೆ 163 ರನ್ ಟಾರ್ಗೆಟ್ ನೀಡಿದೆ.  

ದೆಹಲಿ(ಏ.04): ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಖುದ್ದು ರಿಷಬ್ ಪಂತ್ ಮೈದಾನಕ್ಕೆ ಆಗಮಿಸಿದ ಚಿಯರ್ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮಾರಕ ದಾಳಿ ನಡುವೆಯೂ ದಿಟ್ಟ ಹೋರಾಟ ನೀಡಿದೆ . ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿದೆ. ಡೇವಿಡ್ ವಾರ್ನರ್, ಸರ್ಫರಾಜ್ ಖಾನ್ ಹಾಗೂ ಅಕ್ಸರ್ ಪಟೇಲ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ಮೊತ್ತ ಟಾರ್ಗೆಟ್ ನೀಡಿದೆ.

ಟಾಸ್‌ನಲ್ಲಿ ಹಿನ್ನಡೆ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮೊಹಮ್ಮದ್ ಶಮಿ ಮಾರಕ ದಾಳಿಗೆ ಡೆಲ್ಲಿ ಆರಂಭದಲ್ಲೇ ತತ್ತರಿಸಿತು. 29 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಆಘಾತ ಎದುರಾಗಿತ್ತು. ಪೃಥ್ವಿ ಶಾ ಕೇವಲ 7 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಶ್ ನಿರ್ಗಮಿಸಿದರು. ಮಾರ್ಶ್ 4 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟ ಆರಂಭಿಸಿದರು.

ಡೇವಿಡ್ ವಾರ್ನರ್ ಹಾಗೂ ಸರ್ಫರಾಜ್ ಖಾನ್ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ 32 ಎಸೆತದಲ್ಲಿ 37 ರನ್ ಸಿಡಿಸಿದ ಡೇವಿಡ್ ವಾರ್ನರ್ ವಿಕೆಟ್ ಪತನಗೊಂಡಿತು. ಇತ್ತ ರಿಲೆ ರೊಸೊ ಡಕೌಟ್ ಆದರು. 67 ರನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಮಾಡಿದ ಅಭಿಷೇಕ್ ಪೊರೆಸ್ ಭರವಸೆ ಮೂಡಿಸಿದರೂ ರನ್ ಹೊಳೆ ಹರಿಯಲಿಲ್ಲ. ಅಭಿಷೇಕ್ ಹೋರಾಟ 20 ರನ್‌ಗೆ ಅತ್ಯವಾಯಿತು. 

ಸರ್ಫರಾಜ್ ಖಾನ್ ಎಚ್ಚರಿಕೆ ಹೋರಾಟ ನೀಡಿದರೂ 30 ರನ್‌ಗೆ ಅಂತ್ಯಗೊಂಡಿತು. 130 ರನ್‌ ಗಳಿಸುವಷ್ಟರಲ್ಲೇ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಕ್ಸರ್ ಪಟೇಲ್ ಹೋರಾಟ ಆರಂಭಿಸಿದರು. ಇತ್ತ ಅಮನ್ ಹಕೀಮ್ ಖಾನ್ ಕೇವಲ 8 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ 22 ಎಸೆತದಲ್ಲಿ 36 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.