ಬೆಂಗಳೂರಿನಲ್ಲಿ ಆರ್‌ಸಿಬಿ ಎದುರು ರೋಚಕ ಗೆಲುವು ದಾಖಲಿಸಿದ ಲಖನೌಅನುಚಿತವಾಗಿ ವರ್ತಿಸಿದ ಆವೇಶ್ ಖಾನ್‌ಗೆ ಎಚ್ಚರಿಕೆ ನೀಡಿದ ಐಪಿಎಲ್ ಕಮಿಟಿಸೋಲಿನ ಬೆನ್ನಲ್ಲೇ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌ಗೂ ದಂಡದ ಬರೆ
ಬೆಂಗಳೂರು(ಏ.11): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು ಕೊನೆಯ ಎಸೆತದಲ್ಲಿ ಒಂದು ವಿಕೆಟ್ ರೋಚಕ ಜಯ ಸಾಧಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಎದುರು ಲಖನೌ ಸೂಪರ್ ಜೈಂಟ್ಸ್ ದಾಖಲಿಸಿದ ಮೊದಲ ಗೆಲುವು ಎನಿಸಿಕೊಂಡಿತು. ಇನ್ನು ಪಂದ್ಯ ಗೆಲ್ಲುತ್ತಿದ್ದಂತೆಯೇ ಆವೇಶಭರಿತವಾಗಿ ವರ್ತಿಸಿ ಮೈದಾನದಲ್ಲೇ ಹೆಲ್ಮೆಟ್ ಬೀಸಾಕಿದ್ದ ಆವೇಶ್ ಖಾನ್‌ಗೆ ಐಪಿಎಲ್ ಕಮಿಟಿಯು ಶಿಸ್ತುಕ್ರಮ ಜರುಗಿಸುವ ಮೂಲಕ ಬರೆ ಎಳೆದಿದೆ.
ಹೌದು, ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆವೇಶ್ ಖಾನ್, ಪಂದ್ಯ ಗೆಲ್ಲುತ್ತಿದ್ದಂತೆಯೇ ಹೆಲ್ಮೆಟ್ ಮೈದಾನಕ್ಕೆ ಎಸೆದು ಆವೇಶಭರಿತವಾಗಿ ವರ್ತಿಸಿದ್ದರು. ಇದು ಐಪಿಎಲ್ ನೀತಿಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದ್ದು, ಆವೇಶ್ ಖಾನ್, ಐಪಿಎಲ್ ಕೋಡ್ ಆಫ್ ಕಂಡಕ್ಟ್‌ನ 2.2ರ ಲೆವೆಲ್ 01 ಹಂತ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫ್ರಿ, ಆವೇಶ್ ಖಾನ್‌ಗೆ ಎಚ್ಚರಿಕೆ ನೀಡಲಾಗಿದೆ ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆವೇಶ್ ಖಾನ್‌ಗೆ ಯಾವುದೇ ಹಣಕಾಸಿನ ದಂಡ ವಿಧಿಸಿಲ್ಲ, ಬದಲಾಗಿ ಔಪಚಾರಿಕವಾಗಿ ಎಚ್ಚರಿಕೆ ನೀಡಲಾಗಿದೆ.
20ನೇ ಓವರ್‌ನ ಕೊನೆಯ ಎಸೆತದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಗೆಲ್ಲಲು ಒಂದು ರನ್ ಅಗತ್ಯವಿತ್ತು. ಹರ್ಷಲ್ ಪಟೇಲ್ ಬೌಲಿಂಗ್ ಮಾಡುವ ಮುನ್ನ ನಾನ್‌ಸ್ಟ್ರೈಕ್‌ನಲ್ಲಿದ್ದ ರವಿ ಬಿಷ್ಣೋಯಿ ಕ್ರೀಸ್ ತೊರೆದು ರನ್ ಓಡುವ ಯತ್ನ ನಡೆಸಿದಾಗ, ಪಟೇಲ್ ವಿಫಲ ಮಂಕಡ್ ರನೌಟ್ ಮಾಡುವ ಯತ್ನ ನಡೆಸಿದರು. ಇನ್ನು ಇದಾದ ಬಳಿಕ ಹರ್ಷಲ್ ಪಟೇಲ್ ಎಸೆದ ಚೆಂಡನ್ನು ಕನೆಕ್ಟ್ ಮಾಡಲು ಆವೇಶ್ ಖಾನ್‌ಗೆ ಸಾಧ್ಯವಾಗಲಿಲ್ಲ. ಹೀಗಿದ್ದೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡನ್ನು ಹಿಡಿಯಲು ತಡಬಡಾಯಿಸಿದ್ದರಿಂದ ಆವೇಶ್ ಖಾನ್ ಬೈಸ್ ಮೂಲಕ ಒಂದು ರನ್ ಓಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇದೇ ಖುಷಿಯಲ್ಲಿ ಆವೇಶ್ ಖಾನ್ ಸಂಯಮ ಮೀರಿ ವರ್ತಿಸಿದ್ದರು.
ಇನ್ನು ಲಖನೌ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದ ವೇಳೆ ಮಂದಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಿ ಮುಗಿಸಲು ವಿಫಲವಾಗಿದ್ದರು.
ಲಖನೌ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್ ಫ್ಯಾನ್ಸ್!
"ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಧಾನಗತಿಯ ಬೌಲಿಂಗ್ ಮಾಡಿದೆ. ಇದು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿರುವುದರಿಂದಾಗಿ, ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಸಿಬಿ-ಲಖನೌ ನಡುವಿನ ಪಂದ್ಯ ಹೇಗಿತ್ತು ಎನ್ನುವುದನ್ನು ನೋಡುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ವಿರಾಟ್ ಕೊಹ್ಲಿ(61), ಫಾಫ್ ಡು ಪ್ಲೆಸಿಸ್(79*) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(59) ಸ್ಪೋಟಕ ಅರ್ಧಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತ್ತು.
ಇನ್ನು ಕಠಿಣ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡವು 23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋನಿಸ್(65) ಹಾಗೂ ನಿಕೋಲಸ್ ಪೂರನ್(62) ಸಿಡಿಲಬ್ಬರದ ಅರ್ಧಶತಕ ಹಾಗೂ ಆಯುಷ್ ಬದೋನಿ ಸಮಯೋಚಿತ 30 ರನ್‌ಗಳ ನೆರವಿನಿಂದ ಲಖನೌ ತಂಡವು ಗೆಲುವಿನ ನಗೆ ಬೀರಿತು.
