IPL 2023: ವಿರಾಟ್ ಕೊಹ್ಲಿ ಕೊಂಚ ಅಹಂಕಾರಿ ಎಂದುಕೊಂಡಿದ್ದೆ..! ಎಬಿಡಿ ಬಿಚ್ಚುಮಾತು ವೈರಲ್
* 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭ
* ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದ ಕ್ಷಣ ಮೆಲುಕು ಹಾಕಿದ ವಿರಾಟ್ ಕೊಹ್ಲಿ
* ಕೊಹ್ಲಿ ಕೊಂಚ ಅಹಂಕಾರಿಯಾದ ವ್ಯಕ್ತಿಯೆಂದೇ ಭಾವಿಸಿದ್ದೆ ಎಂದ ಎಬಿಡಿ
ಬೆಂಗಳೂರು(ಮಾ.28): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕಳೆದವಾರವಷ್ಟೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್ 02ರಂದು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
ಇನ್ನು, 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮಾರ್ಚ್ 26ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಆರ್‌ಸಿಬಿ ಪರ ಕೆಲವು ವರ್ಷಗಳ ಕಾಲ ಅದ್ಭುತ ಪ್ರದರ್ಶನ ತೋರಿದ್ದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್, ಆರ್‌ಸಿಬಿ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗ ನಿಮಗೇನು ಅನಿಸಿತು ಎನ್ನುವ ಪ್ರಶ್ನೆಗೆ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಮುಕ್ತವಾಗಿ ಮಾತನಾಡಿದ್ದು, ಆತ ನೋಡುವುದಕ್ಕೆ ಕೊಂಚ ಅಹಂಕಾರಿಯಂತೆ ಕಂಡು ಬಂದಿದ್ದರು ಎಂದು ಹೇಳಿದ್ದಾರೆ.
ನಾನು ಈ ಹಿಂದೆಯೂ ಈ ರೀತಿಯ ಪ್ರಶ್ನೆಯನ್ನು ಎದುರಿಸಿದ್ದೇನೆ. ನಾನು ಮತ್ತೊಮ್ಮೆ ಅದೇ ಪ್ರಾಮಾಣಿಕ ಉತ್ತರವನ್ನು ಹೇಳಲು ಬಯಸುತ್ತೇನೆ. ನಾನು ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ ಎಂದು ಆ ದಿನಗಳನ್ನು ಎಬಿಡಿ ಮೆಲುಕು ಹಾಕಿದ್ದಾರೆ.
ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ, ನೂತನ ಜೆರ್ಸಿ ಅನಾವರಣ ಮಾಡಿದ ಕೊಹ್ಲಿ- ಫಾಫ್ ಜೋಡಿ
ಆದರೆ ದಿನಕಳೆದಂತೆ ವಿರಾಟ್ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು ಎಂದು 39 ವರ್ಷದ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. " ನನ್ನ ಪ್ರಕಾರ, ಅವರು ತಮ್ಮ ಸುತ್ತ, ಒಂದು ಬೇಲಿಯನ್ನು ಹಾಕಿಕೊಂಡಿದ್ದರು ಎಂದೆನಿಸುತ್ತದೆ. ನಾನು ಅವರ ಜತೆ ಮೊದಲ ಬಾರಿ ಭೇಟಿಯಾದ ಬಳಿಕ ಆ ಬೇಲಿಯಿಂದ ಹೊರಬಂದರು. ನಾನು ಅವರೇನು ಎನ್ನುವುದನ್ನು ಅರಿತುಕೊಂಡೆ. ಮೊದಲ ಭೇಟಿಯ ಬಳಿಕ ವಿರಾಟ್ ಕೊಹ್ಲಿ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಈಗ ಹೇಳುತ್ತಿದ್ದೇನೆ ಅವರೊಬ್ಬ ಅದ್ಭುತ ವ್ಯಕ್ತಿ, ಆದರೆ ಮೊದಲ ಭೇಟಿಯನ್ನು ನೆನಪಿಸಿಕೊಂಡರೆ, ಅಬ್ಬಾ" ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ 2011ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಒಟ್ಟು 156 ಪಂದ್ಯಗಳನ್ನಾಡಿರುವ ಎಬಿ ಡಿವಿಲಿಯರ್ಸ್ 37 ಅರ್ಧ ಶತಕ ಹಾಗೂ 2 ಶತಕ ಸಹಿತ ಒಟ್ಟಾರೆ 4,491 ರನ್ ಬಾರಿಸಿ ಮಿಂಚಿದ್ದಾರೆ. ಎಬಿ ಡಿವಿಲಿಯರ್ಸ್ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಎಬಿ ಡಿವಿಲಿಯರ್ಸ್ ಆಡಿದ ಹಲವು ಟಿ20 ಇನಿಂಗ್ಸ್‌ಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಎಬಿ ಡಿವಿಲಿಯರ್ಸ್, 2021ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆರ್‌ಸಿಬಿ ಪರ 150+ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದರು ಎನ್ನುವುದು ಮತ್ತೊಂದು ವಿಶೇಷ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 5 ಬಾರಿ 100+ ರನ್ ಹಾಗೂ ಎರಡು ಬಾರಿ 200+ ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ಎರಡು ದಾಖಲೆಯ ಜತೆಯಾಟವಾಡಿದ ಜಗತ್ತಿನ ಏಕೈಕ ಜೋಡಿ ಎನ್ನುವ ಹೆಗ್ಗಳಿಕೆ ಈ ಇಬ್ಬರು ಆಟಗಾರರಿಗೆ ಸಲ್ಲುತ್ತದೆ.