ಕಳೆದ 5 ಪಂದ್ಯದಲ್ಲಿ ಡೆಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಅಸಲು ಬಡ್ಡಿ ಸೇರಿಸಿದ ಪ್ರದರ್ಶನ ನೀಡಿದೆ. ಮಾರಕ ದಾಳಿ ಸಂಘಟಿಸಿದ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ತಂಡವನ್ನು 127 ರನ್‌ಗೆ ಆಲೌಟ್ ಮಾಡಿದೆ
ದೆಹಲಿ(ಏ.20): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫಾರ್ಮ್ ಕಳೆದುಕೊಂಡಿದೆ, ಬೌಲಿಂಗ್ ಸಪ್ಪೆಯಾಗಿದೆ ಅನ್ನೋ ಟೀಕೆಗಳಿತ್ತು. ಆದರೆ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಜೇಸನ್ ರಾಯ್ ಹೋರಾಟ, ಕೊನೆಯ ಓವರ್‌ನಲ್ಲಿ ರಸೆಲ್ ಅಬ್ಬರಿಸಿದರೂ ಡೆಲ್ಲಿ ದಾಳಿಗೆ ಕೆಕೆಆರ್ 127 ರನ್‌ಗೆ ಆಲೌಟ್ ಆಗಿದೆ.
ಮಳೆಯಿಂದಾಗ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡ ಆರಂಭದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ದಾಳಿಗೆ ತತ್ತರಿಸಿತು. ಆರಂಭಿಕ ಜೇಸನ್ ರಾಯ್ ಹೋರಾಟ ನೀಡಿದರು. ಆದರೆ ಇತರರಿಂದ ಯಾವುದೇ ಹೋರಾಟ ಮೂಡಿಬರಲಿಲ್ಲ. ಇದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಅವಕಾಶವೇ ನೀಡಲಿಲ್ಲ.
ಲಿಟ್ಟನ್ ದಾಸ್ 4, ವೆಂಕಟೇಶ್ ಅಯ್ಯರ್ ಶೂನ್ಯ, ನಾಯಕ ನಿತೀಶ್ ರಾಣಾ 4, ಮನ್ದೀಪ್ ಸಿಂಗ್ 12, ರಿಂಕು ಸಿಂಗ್ 6, ಸುನಿಲ್ ನರೈನ್ 4 ರನ್ ಸಿಡಿಸಿ ಔಟಾದರು. 2ನೇ ಓವರ್‌ನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿಕೆಟ್ ಪತನ ಆರಂಭಗೊಂಡಿತು. ಬಳಿಕ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿಕೊಂಡರು. ಜೇಸನ್ ರಾಯ್ 43 ರನ್ ಸಿಡಿಸಿ ಔಟಾದರು.
ಅಂಕುಲ್ ರಾಯ್, ಉಮೇಶ್ ಯಾದವ್ ನಿರಾಸೆ ಮೂಡಿಸಿದರು. ಆ್ಯಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದರೂ ಅಬ್ಬರ ಕಾಣಲಿಲ್ಲ. ನಾನ್ ಸ್ಟ್ರೈಕ್‌ನಲ್ಲಿ ವರುಣ್ ಚಕ್ರವರ್ತಿ ನಿಲ್ಲಿಸಿ ರಸೆಲ್, ಬೌಂಡರಿ ಸಿಕ್ಸರ್ ಹೊಡೆತಕ್ಕೆ ಯತ್ನಿಸಿದರು. ಅಂತಿಮ ಓವರ್‌ನಲ್ಲಿ ರಸೆಲ್ ಯಶಸ್ವಿಯಾದರು. ಮುಕೇಶ್ ಕುಮಾರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚಿತ್ರಣ ಬದಲಿಸಿದರು.
ಆ್ಯಂಡ್ರೆ ರಲೆಸ್ ಅಜೇಯ 37 ರನ್ ಸಿಡಿಸಿದರು. ಕೊನೆಯ ಎಸೆತದಲಿ ವರುಣ್ ಚಕ್ರವರ್ತಿ ರನೌಟ್ ಆಗುವ ಮೂಲಕ ಕೆಕೆಆರ್ 127 ರನ್‌ಗೆ ಆಲೌಟ್ ಆಯಿತು.
