IPL 2022: ಸನ್‌ರೈಸರ್ಸ್ ಪರ ವಾಷಿಂಗ್ಟನ್ ಸುಂದರ್ ಸ್ಥಾನ ತುಂಬೋರು ಯಾರು..?

* ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್ ಸವಾಲು

* ಕೆಕೆಆರ್ ಎದುರಿನ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅಲಭ್ಯ

* ಆಯ್ಕೆ ಗೊಂದಲಕ್ಕೆ ಸಿಲುಕಿದೆ ಆರೆಂಜ್ ಆರ್ಮಿ

IPL 2022 Washington unavailability Sunrisers Hyderabad new selection headache ahead of kkr match kvn

ಬೆಂಗಳೂರು(ಏ.15): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. 2016ರ ಐಪಿಎಲ್ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವು ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ಸತತ ಎರಡು ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿದೆ. ಇದೀಗ ಇಂದು ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಸವಾಲು ಸ್ವೀಕರಿಸಲು ಸಜ್ಜಾಗಿದೆ. ಹೀಗಿರುವಾಗಲೇ ಆರೆಂಜ್ ಆರ್ಮಿಯ ಪಾಳಯದಲ್ಲಿ ವಾಷಿಂಗ್ಟನ್ ಸುಂದರ್ (Washington Sundar) ಅನುಪಸ್ಥಿತಿ ತಂಡದ ಆಯ್ಕೆಯ ತಲೆನೋವು ಹೆಚ್ಚುವಂತೆ ಮಾಡಿದೆ.  

ಈ ವಾರದ ಆರಂಭದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ದದ ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಗಾಯಗೊಂಡು ಕೆಲ ಪಂದ್ಯಗಳ ಮಟ್ಟಿಗೆ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಥಾನವನ್ನು ತುಂಬುವ ಆಟಗಾರ ಯಾರು ಎನ್ನುವ ಕುತೂಹಲ ಜೋರಾಗಿದೆ. 

ವರದಿಗಳ ಪ್ರಕಾರ ಕರ್ನಾಟಕದ ಸ್ಟಾರ್ ಆಟಗಾರರಾದ ಶ್ರೇಯಸ್ ಗೋಪಾಲ್ (Shreyas Iyer) ಇಲ್ಲವೇ ಎಡಗೈ ಸ್ಪಿನ್ನರ್ ಜಗದೀಶ ಸುಚಿತ್ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಇಬ್ಬರು ಆಟಗಾರರು ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ರನ್‌ ಕಾಣಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ತಂಡದ ಮ್ಯಾನೇಜ್‌ಮೆಂಟ್‌ ಸನ್‌ರೈಸರ್ಸ್‌ ಹೈದರಾಬಾದ್‌ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಬ್ದುಲ್ ಸಮದ್‌ಗೆ (Abdul Samad) ಅವಕಾಶ ನೀಡಿದರೂ ಅಚ್ಚರಿ ಪಡುವಂತಿಲ್ಲ. ಅಬ್ದುಲ್ ಸಮದ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಟೀಂ ಇಂಡಿಯಾಗೆ ವಾಪಸ್‌ ಆಗುವತ್ತ ಹಾರ್ದಿಕ್‌ ದಿಟ್ಟಹೆಜ್ಜೆ

ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ಎದುರು ತಂಡದ ಪ್ರಮುಖ ಆಲ್ರೌಂಡರ್‌ ಸೇವೆ ಇಲ್ಲದೇ ಕಣಕ್ಕಿಳಿಯುತ್ತಿರುವುದರಿಂದ, ಆರೆಂಜ್ ಆರ್ಮಿಯ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ತಮ್ಮ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ರಾಹುಲ್ ತ್ರಿಪಾಠಿ ತಮ್ಮ ಹಳೆಯ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸಿಡಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.  

ದೇಶಿ ಪ್ರತಿಭೆಗಳಾದ ರಾಹುಲ್ ತ್ರಿಫಾಠಿ ಹಾಗೂ ಅಭಿಷೇಕ್ ಶರ್ಮಾ ಭರ್ಜರಿ ಪ್ರದರ್ಶನ ತೋರಿದರೆ, ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್ ಹಾಗೂ ಏಯ್ಡನ್ ಮಾರ್ಕ್‌ರಮ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೆಕೆಆರ್ ತಂಡದ ಮಾರಕ ವೇಗಿಗಳಾದ ಉಮೇಶ್ ಯಾದವ್, ಪ್ಯಾಟ್ ಕಮಿನ್ಸ್ ಜತೆಗೆ ಮಿಸ್ಟ್ರಿ ಸ್ಪಿನ್ನರ್‌ಗಳಾದ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಎದುರು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಸನ್‌ರೈಸರ್ಸ್ ಹೈದ್ರಾಬಾದ್‌: ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಶ್ರೇಯಸ್ ಗೋಪಾಲ್‌/ ಜಗದೀಶ ಸುಚಿತ್‌, ಶಶಾಂಕ್‌, ಭುವನೇಶ್ವರ್ ಕುಮಾರ್‌, ಮಾರ್ಕೊ ಯಾನ್ಸನ್‌, ಉಮ್ರಾನ್ ಮಲಿಕ್‌, ಟಿ ನಟರಾಜನ್‌.

ಕೋಲ್ಕತಾ ನೈಟ್ ರೈಡರ್ಸ್‌‌: ವೆಂಕಟೇಶ್‌ ಅಯ್ಯರ್‌, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್‌(ನಾಯಕ), ನಿತೀಶ್ ರಾಣಾ‌, ಸ್ಯಾಮ್ ಬಿಲ್ಲಿಂಗ್ಸ್‌, ಆ್ಯಂಡ್ರೆ ರಸೆಲ್‌, ಸುನಿಲ್‌ ನರೈನ್‌, ಪ್ಯಾಟ್ ಕಮಿನ್ಸ್‌, ಉಮೇಶ್‌ ಯಾದವ್, ರಸಿಖ್ ಶೇಕ್‌, ವರುಣ್‌ ಚಕ್ರವರ್ತಿ

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ, 
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios