IPL 2022: ಎಬಿ ಡಿವಿಲಿಯರ್ಸ್ ಕುರಿತಂತೆ ಗುಡ್ ನ್ಯೂಸ್ ನೀಡಿದ ವಿರಾಟ್ ಕೊಹ್ಲಿ..!
* ಪ್ಲೇ ಆಫ್‌ಗೇರುವ ಹೊಸ್ತಿಲಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಮಿಸ್ಟರ್ ನ್ಯಾಗ್ಸ್ ಶೋನಲ್ಲಿ ಮನಬಿಚ್ಚಿ ಮಾತನಾಡಿದ ವಿರಾಟ್ ಕೊಹ್ಲಿ
* ಮುಂದಿನ ವರ್ಷ ಎಬಿಡಿ ಆರ್‌ಸಿಬಿ ಕೂಡಿಕೊಳ್ಳಲಿದ್ದಾರೆ ಎಂದ ಕಿಂಗ್ ಕೊಹ್ಲಿ
ಬೆಂಗಳೂರು(ಮೇ.11): ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಮತ್ತು ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟರ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ವರ್ಷ ಈ ಕಿಲಾಡಿ ಜೋಡಿ ಆರ್‌ಸಿಬಿ ತಂಡದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಸುಳಿವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನೀಡಿದ್ದಾರೆ. ಈ ಸುದ್ದಿ ತಿಳಿದು ಆರ್‌ಸಿಬಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕಳೆದ ವರ್ಷವಷ್ಟೇ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಎಬಿಡಿ ವಿದಾಯ ಹೇಳುವ ಮುನ್ನ ದಶಕದ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದರು. ಇದೀಗ ಆರ್‌ಸಿಬಿ ಮಿಸ್ಟರ್ ನ್ಯಾಗ್ಸ್ ಶೋನಲ್ಲಿ ವಿರಾಟ್ ಕೊಹ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ನಾನು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನಿತ್ಯ ಅವರ ಜತೆ ಮಾತನಾಡುತ್ತಿರುತ್ತೇನೆ. ಅವರು ಕೆಲ ದಿನಗಳ ಹಿಂದಷ್ಟೇ ಗಾಲ್ಫ್ ಪಂದ್ಯಾವಳಿಯನ್ನು ನೋಡಲು ಅಮೆರಿಕಗೆ ಕುಟುಂಬದೊಟ್ಟಿಗೆ ತೆರಳಿದ್ದರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನವನ್ನು ಗಮನಿಸುತ್ತಿದ್ದಾರೆ, ಹಾಗೂ ಮುಂದಿನ ವರ್ಷ ಅವರು ನಮ್ಮ ತಂಡದಲ್ಲಿ ಇರಲಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಹಿಂದೆಂದು ಕಂಡು-ಕೇಳರಿಯದ ರೀತಿಯ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 12 ಐಪಿಎಲ್ ಪಂದ್ಯಗಳನ್ನಾಡಿ ಕೇವಲ ಒಂದು ಅರ್ಧಶತಕ ಸಹಿತ 216 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಬಾರಿಯ ಐಪಿಎಲ್‌ನಲ್ಲಿ ಮೂರು ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.
IPL 2022: ಹ್ಯಾಟ್ರಿಕ್ ಸೋಲಿನ ಬಳಿಕ ಕೆರಳಿದ ನಿಂತ RCB ಬಾಯ್ಸ್
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ನನ್ನ ವೃತ್ತಿ ಜೀವನದಲ್ಲೇ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಈ ಕಾರಣಕ್ಕಾಗಿಯೇ ಮೂರನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದಾಗ ಕಿರುನಗೆ ಬೀರಿದೆ. ಇದೇ ವೇಳೆ ತಾವು ಯಾವುದೇ ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಿಂಗ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ 12 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 5 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ಗೇರುವ ಲೆಕ್ಕಾಚಾರದಲ್ಲಿದೆ. ಕಳೆದ 14 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಆರ್‌ಸಿಬಿ ತಂಡವು, ಈ ಬಾರಿಯಾದರೂ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.