IPL 2022 ಮುಂಬೈ ವಿರುದ್ಧ 3 ರನ್ ರೋಚಕ ಗೆಲುವು ಕಂಡ ಹೈದರಾಬಾದ್!
- ಗೆಲುವಿಗೆ 194 ರನ್ ಟಾರ್ಗೆಟ್ ಪಡೆದಿದ್ದ ಮುಂಬೈ
- ಆರಂಭದಲ್ಲಿ ಅಬ್ಬರಿಸಿ ಬಳಿಕ ಸೈಲೆಂಟ್ ಆದ ಮುಂಬೈ
- ಮುಂಬೈ ಮಣಿಸಿ ಗೆಲುವಿನ ನಗೆ ಬೀರಿದ ಹೈದರಾಬಾದ್
ಮುಂಬೈ(ಮೇ.17): ಐಪಿಎಲ್ 2022 ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ಲೆಕ್ಕಾಚಾರವೂ ಕೈಗೂಡಲಿಲ್ಲ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಇತ್ತ ಹೈದರಾಬಾದ್ ದಿಟ್ಟ ಪ್ರದರ್ಶನ ನೀಡುವ ಮೂಲಕ 3 ರನ್ ಗೆಲುವು ದಾಖಲಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ 194 ರನ್ ಟಾರ್ಗೆಟ್ ನೀಡಿ ಆತ್ಮವಿಶ್ವಾಸದಲ್ಲಿತ್ತು. ಆದರೆ ಚೇಸಿಂಗ್ ಇಳಿದ ಮುಂಬೈ ಲೆಕ್ಕಾಚಾರ ಉಲ್ಟಾ ಮಾಡಿತು. ಸುಲಭವಾಗಿ ರನ್ ಚೇಸ್ ಮಾಡಬಲ್ಲ ಸೂಚನೆ ನೀಡಿತು. ಇದಕ್ಕೆ ತಕ್ಕಂತೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು.
ರೋಹಿತ್ ಶರ್ಮಾ 48 ರನ್ ಸಿಡಿಸಿ ಔಟಾದರು. ಇಶಾನ್ ಕಿಶನ್ 43 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಮುಂಬೈ ದಿಢೀರ್ ಕುಸಿತ ಕಂಡಿತು. ಡೇನಿಯಲ್ ಸ್ಯಾಮ್ಸ್, ತಿಲಕ್ ವರ್ಮಾ ಅಬ್ಬರಿಸಲಿಲ್ಲ. ಆದರೆ ಟಿಮ್ ಡೇವಿಡ್ ಹೋರಾಟ ಮುಂಬೈ ತಂಡದಲ್ಲಿನ ಗೆಲುವಿನ ಆಸೆ ಚಿಗರುಸಿತು.
ಟಿಮ್ ಡೇವಿಡ್ ಅಬ್ಬರಿಸಿದರೆ, ಇತರರಿಂದ ಉತ್ತಮ ಸಾಥ್ ಸಿಗಿಲ್ಲ. ಡೇವಿಡ್ 46 ರನ್ ಸಿಡಿಸಿ ರನೌಟ್ ಆದರು. ಇದರೊಂದಿಗೆ ಮುಂಬೈ ಗೆಲುವಿನ ಆಸೆ ಕಮರಿತು. ಅಂತಿಮ ಹಂತದಲ್ಲಿ ರಮನದೀಪ್ ಸಿಂಗ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಶ್ರಮಿಸಿದರು.ರಮನದೀಪ್ 6 ಎಸೆತದಲ್ಲಿ 1 ಬೌಂಡರಿ 1 ಸಿಕ್ಸರ್ ನೆರವಿನಿಂದ ಅಜೇಯ 14 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ಹೈದರಾಬಾದ್ 3 ರನ್ ರೋಚಕ ಗೆಲುವು ಕಂಡಿತು.