IPL 2022: ಮುಂಬೈ ಪ್ಲೇ ಆಫ್ ಕನಸು ಭಗ್ನ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಮೀಮ್ಸ್‌ಗಳಿವು..!
* ಮುಂಬೈ ಇಂಡಿಯನ್ಸ್ ವಿರುದ್ದ ಗೆದ್ದು ಬೀಗಿದ ಲಖನೌ ಸೂಪರ್ ಜೈಂಟ್ಸ್
* 8ಕ್ಕೆ 8 ಐಪಿಎಲ್ ಪಂದ್ಯಗಳನ್ನು ಸೋತ ರೋಹಿತ್ ಶರ್ಮಾ ಪಡೆ
* ದಾಖಲೆ ಮೊತ್ತಕ್ಕೆ ಸೇಲಾಗಿದ್ದ ಇಶಾನ್ ಕಿಶನ್ ಫುಲ್ ಫೇಲ್
ಬೆಂಗಳೂರು(ಏ.25): ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವು, 15ನೇ ಅವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಸೋಲಿನ ಕೂಪಕ್ಕೆ ಸಿಲುಕಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೊದಲ 8 ಪಂದ್ಯಗಳ ಪೈಕಿ ಎಂಟೂ ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸುವುದರ ಜತೆಗೆ ಪ್ಲೇ ಆಫ್ ರೇಸ್‌ನಿಂದಲೂ ಬಹುತೇಕ ಹೊರಬಿದ್ದಿದೆ. ಐಪಿಎಲ್‌ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 36 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಲಖನೌ ಗೆಲುವಿಗೆ ಪ್ರಮುಖ ಕಾರಣಕರ್ತರು ನಾಯಕ ಕೆ.ಎಲ್.ರಾಹುಲ್ (KL Rahul), ವೇಗಿ ದುಷ್ಮಾಂತ ಚಮೀರ ಹಾಗೂ ಸ್ಪಿನ್ನರ್ ಕೃನಾಲ್ ಪಾಂಡ್ಯ (Krunal Pandya). ರಾಹುಲ್‌ರ ಅಮೋಘ ಶತಕದ ನೆರವಿನಿಂದ ಲಖನೌ 20 ಓವರಲ್ಲಿ 6 ವಿಕೆಟ್‌ಗೆ 168 ರನ್ ಕಲೆಹಾಕಿದರೆ, ಚಮೀರ (4 ಓವರಲ್ಲಿ 14 ರನ್, 15 ಡಾಟ್ ಬಾಲ್) ಹಾಗೂ ಕೃನಾಲ್ ಪಾಂಡ್ಯ (4 ಓವರ್ 19 ರನ್‌ಗೆ 3 ವಿಕೆಟ್) ಅವರ ಸೊಗಸಾದ ಸ್ಪೆಲ್‌ಗಳ ನೆರವಿನಿಂದ ಮುಂಬೈ ತಂಡವನ್ನು ಲಖನೌ 8 ವಿಕೆಟ್‌ಗೆ 132 ರನ್‌ಗಳಿಗೆ ಕಟ್ಟಿಹಾಕಿತು.
15.25 ಕೋಟಿ ರು.ಗೆ ಸೇಲಾಗಿದ್ದ ಇಶಾನ್ ಕಿಶನ್ 20 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರೆ, 5 ಬೌಂಡರಿ, 1 ಸಿಕ್ಸರ್‌ನೊಂದಿಗೆ 39 ರನ್ ಬಾರಿಸಿ ಭರವಸೆ ಮೂಡಿಸಿದ್ದ ರೋಹಿತ್ ಶರ್ಮಾ ಅವರನ್ನು ಕೃನಾಲ್ ಪೆವಿಲಿಯನ್‌ಗಟ್ಟಿಲಖನೌ ಮೇಲುಗೈ ಸಾಧಿಸುವಂತೆ ಮಾಡಿದರು. ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದ್ದ ಮುಂಬೈ 67 ರನ್ ಆಗುವಷ್ಟರಲ್ಲಿ ಸೂರ್ಯಕುಮಾರ್ ಸೇರಿ ನಾಲ್ವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ತಿಲಕ್ ವರ್ಮಾ(38) ಹಾಗೂ ಕೀರನ್ ಪೊಲ್ಲಾರ್ಡ್(19) ತಮ್ಮಿಂದ ಪಂದ್ಯ ಕಸಿದುಕೊಳ್ಳಲು ಲಖನೌ ಬೌಲರ್‌ಗಳು ಬಿಡಲಿಲ್ಲ. ಕೊನೆ ಓವರಲ್ಲಿ 3 ವಿಕೆಟ್ ಪತನಗೊಂಡವು.
IPL 2022 ಮುಂಬೈ ಇಂಡಿಯನ್ಸ್ ವಿರುದ್ದ 3ನೇ ಶತಕ, ಹೊಸ ದಾಖಲೆ ಬರೆದ ಕೆ ಎಲ್ ರಾಹುಲ್
ರಾಹುಲ್ ಅಬ್ಬರ: ಲಖನೌ ಪರ ರಾಹುಲ್ ಏಕಾಂಗಿ ಹೋರಾಟ ನಡೆಸಿದರು. 62 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್‌ನೊಂದಿಗೆ ರಾಹುಲ್ 103 ರನ್ ಗಳಿಸಿದರೆ, ಉಳಿದ ಬ್ಯಾಟರ್‌ಗಳೆಲ್ಲಾ ಸೇರಿ 58 ಎಸೆತಗಳಲ್ಲಿ 57 ರನ್ ಕಲೆಹಾಕಿದರು. ತಮ್ಮ ಸಹ ಆಟಗಾರರಿಂದ ಸೂಕ್ತ ಬೆಂಬಲ ಸಿಗದಿದ್ದರೂ ರಾಹುಲ್ ತಮ್ಮ ತಂಡ ಗೌರವ ಮೊತ್ತ ಕಲೆಹಾಕುವಂತೆ ನೋಡಿಕೊಂಡರು.
ಲಖನೌ ಸೂಪರ್ ಜೈಂಟ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವು ಹೀನಾಯ ಸೋಲು ಕಾಣುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದ ಇಶಾನ್ ಇಶನ್ ದಯನೀಯ ವೈಫಲ್ಯ ಅನುಭವಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಭರ್ಜರಿ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟಿರುವ ಕುರಿತಂತೆಯೂ ಮೀಮ್ಸ್‌ಗಳು ಹರಿದಾಡಲಾರಂಭಿಸಿವೆ. ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮುಕ್ತಾಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಮೀಮ್ಸ್‌ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನೋಡಿ ಹಾಗೂ ಎಂಜಾಯ್ ಮಾಡಿ..