IPL 2022 ಮುಂಬೈ ಇಂಡಿಯನ್ಸ್ ವಿರುದ್ದ 3ನೇ ಶತಕ, ಹೊಸ ದಾಖಲೆ ಬರೆದ ಕೆ ಎಲ್ ರಾಹುಲ್
* ಮುಂಬೈ ಇಂಡಿಯನ್ಸ್ ಎದುರು ಮತ್ತೊಂದು ಶತಕ ಚಚ್ಚಿದ ಕೆ.ಎಲ್. ರಾಹುಲ್
* ಶತಕದ ವಿಚಾರದಲ್ಲಿ ಕೊಹ್ಲಿ ಜತೆ ಜಂಟಿ ದಾಖಲೆ ಹಂಚಿಕೊಂಡ ರಾಹುಲ್
* ಒಂದೇ ತಂಡದ ವಿರುದ್ಧ 3 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದ ಕನ್ನಡಿಗ
ಮುಂಬೈ(ಏ.25): 15ನೇ ಆವೃತ್ತಿ ಐಪಿಎಲ್‌ನಲ್ಲಿ (Indian Premier League) ಅಭೂತಪೂರ್ವ ಲಯದಲ್ಲಿರುವ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆ.ಎಲ್.ರಾಹುಲ್ (KL Rahul) ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ಆಕರ್ಷಕ ಶತಕ ಸಿಡಿಸಿದ್ದು, ಒಂದೇ ತಂಡದ ವಿರುದ್ಧ 3 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಭಾನುವಾರದ ಪಂದ್ಯದಲ್ಲಿ ಅವರು 62 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಒಳಗೊಂಡ 103 ರನ್ ಸಿಡಿಸಿದರು. ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲೂ ಅವರು ಶತಕ ಸಿಡಿಸಿದ್ದರು.
ಇದಕ್ಕೂ ಮೊದಲು 2019ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ತಮ್ಮ ಮೊದಲ ಶತಕ ಪೂರ್ತಿಗೊಳಿಸಿದ್ದರು. ರಾಹುಲ್ ಮುಂಬೈ ವಿರುದ್ಧ ಶತಕ ಬಾರಿಸಿದ 2ನೇ ಭಾರತೀಯ ಆಟಗಾರ. 2010ರಲ್ಲಿ ಯೂಸುಫ್ ಪಠಾಣ್ ಮುಂಬೈ ವಿರುದ್ಧ 37 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಇನ್ನು ಆವೃತ್ತಿಯೊಂದರಲ್ಲಿ ಒಂದೇ ತಂಡದ ವಿರುದ್ಧ 2 ಶತಕ ಬಾರಿಸಿದ 2ನೇ ಆಟಗಾರ ರಾಹುಲ್. ಈ ಮೊದಲು ವಿರಾಟ್ ಕೊಹ್ಲಿ 2016ರಲ್ಲಿ ಗುಜರಾತ್ ಲಯನ್ಸ್(100* ಮತ್ತು 109) ವಿರುದ್ಧ 2 ಸೆಂಚೂರಿ ದಾಖಲಿಸಿದ್ದರು.
ಈ ಶತಕದೊಂದಿಗೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಸದ್ಯ ಕೆ ಎಲ್ ರಾಹುಲ್ 8 ಪಂದ್ಯಗಳನ್ನಾಡಿ 368 ರನ್ ಬಾರಿಸಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ (Jos Buttler) 7 ಪಂದ್ಯಗಳನ್ನಾಡಿ 491 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ 4ನೇ ಶತಕ
ರಾಹುಲ್ ಐಪಿಎಲ್‌ನಲ್ಲಿ 4 ಶತಕ ಬಾರಿಸಿದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. 141 ಪಂದ್ಯಗಳಲ್ಲಿ 6 ಶತಕ ಬಾರಿಸಿರುವ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ (Chris Gayle) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 5 ಶತಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್, ಶೇನ್ ವಾಟ್ಸನ್, ಡೇವಿಡ್ ವಾರ್ನರ್ ಕೂಡಾ ಐಪಿಎಲ್‌ನಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ.
6 ಟಿ20 ಶತಕ: ಜಂಟಿ ಅಗ್ರಸ್ಥಾನ
ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ 6 ಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ(5), ಸುರೇಶ್ ರೈನಾ(4) ನಂತರದ ಸ್ಥಾನಗಳಲ್ಲಿದ್ದಾರೆ.
ಕೊಹ್ಲಿಯಿಂದ ಶೀಘ್ರ ದೊಡ್ಡ ಸ್ಕೋರ್: ಬಾಂಗರ್
ಮುಂಬೈ: ವಿರಾಟ್ ಕೊಹ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೂ ರನ್ ಗಳಿಸಲು ವಿಫಲರಾಗುತ್ತಿದ್ದಾರೆ ಎಂದು ಆರ್‌ಸಿಬಿ ತಂಡದ ಪ್ರಮುಖ ಕೋಚ್ ಸಂಜಯ್ ಬಾಂಗರ್ ತಿಳಿಸಿದ್ದಾರೆ. ಶತಕವಿಲ್ಲದೇ 100 ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಿರುವ ಕೊಹ್ಲಿ, ಕೊನೆ 2 ಐಪಿಎಲ್ ಪಂದ್ಯಗಳಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
IPL 2022 ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಚಚ್ಚಿದ ಕೆಎಲ್ ರಾಹುಲ್!
‘ಕೊಹ್ಲಿ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ ಈಗ ಅವರ ಬ್ಯಾಟ್‌ನಿಂದ ರನ್ ಹರಿದು ಬರುತ್ತಿಲ್ಲ. ಉತ್ತಮ ಫಿಟ್ನೆಸ್, ಕೌಶಲ್ಯ ಹೊಂದಿದ್ದರೂ ಅದೃಷ್ಟ ಅವರ ಪರವಾಗಿಲ್ಲ. ಆದರೆ ಸದ್ಯದಲ್ಲೇ ಅವರು ತಮ್ಮ ಹಳೆಯ ಲಯ ಕಂಡುಕೊಳ್ಳಲಿದ್ದು, ದೊಡ್ಡ ಇನ್ನಿಂಗ್‌್ಸ ಆಡಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.