* ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್ ಸವಾಲು* ಧೋನಿ ಮತ್ತೊಮ್ಮೆ ನಾಯಕನಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಮುನ್ನಡೆಸಲಿದ್ದಾರೆ* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಚೆನ್ನೈ ಸೂಪರ್ ಕಿಂಗ್ಸ್

ಪುಣೆ(ಮೇ.01): ಸತತ ಸೋಲುಗಳಿಂದ ಪ್ಲೇ-ಆಫ್‌ ರೇಸ್‌ನಲ್ಲಿ ಹಿಂದೆ ಬಿದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್ (Chennai Super Kings) ಇನ್ನುಳಿದ 6 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದು, ಭಾನುವಾರ ಸನ್‌ರೈಸ​ರ್ಸ್ ಹೈದರಾಬಾದ್‌ (Sunrisers Hyderabad) ಸವಾಲನ್ನು ಎದುರಿಸಲಿದೆ. ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಚೆನ್ನೈ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತೊಮ್ಮೆ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲು ಎದುರು ನೋಡುತ್ತಿದ್ದಾರೆ. ಚೆನ್ನೈ ಆಡಿದ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಇನ್ನು ಸನ್‌ರೈಸರ್ಸ್‌ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಮತ್ತೊಂದು ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪಾಲಿಗೆ ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 6 ಪಂದ್ಯಗಳು ಬಾಕಿ ಉಳಿದಿದ್ದು, ಈ ಎಲ್ಲಾ ಪಂದ್ಯಗಳನ್ನು ಜಯಿಸಿದರೆ ಲೀಗ್ ಪಂದ್ಯಾವಳಿಗಳ ಅಂತ್ಯದ ವೇಳೆಗೆ ಗರಿಷ್ಠವೆಂದರೆ 16 ಅಂಕಗಳನ್ನು ಗಳಿಸಬಹುದಾಗಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಪ್ಲೇ ಆಫ್‌ ಪ್ರವೇಶಿಸಲು 16 ಅಂಕಗಳು ಬಹುತೇಕ ಸಾಕಾಗುವುದಿಲ್ಲ, ಅದೃಷ್ಟ ಕೈ ಹಿಡಿದರೆ ಮಾತ್ರ ಹಾಲಿ ಚಾಂಪಿಯನ್ ಸಿಎಸ್‌ಕೆ ಪ್ಲೇ ಆಫ್ ಹಂತ ಪ್ರವೇಶಿಸಬಹುದಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು, ಸನ್‌ರೈಸರ್ಸ್ ಹೈದರಾಬಾದ್ ಎದುರು ದಿಟ್ಟ ಪ್ರದರ್ಶನ ತೋರಬೇಕಿದ್ದರೆ, ಆರಂಭಿಕ ಬ್ಯಾಟರ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಮೈ ಚಳಿ ಬಿಟ್ಟು ಬ್ಯಾಟ್ ಬೀಸಬೇಕಿದೆ. ಇದರ ಜೊತೆಗೆ ಅಲ್ರೌಂಡರ್ ರವೀಂದ್ರ ಜಡೇಜಾ ಯಾವುದೇ ಒತ್ತಡವಿಲ್ಲದೇ ಸಹಜ ಆಟವನ್ನು ಪ್ರದರ್ಶಿಸಬೇಕಿದೆ. ದೀಪಕ್ ಚಹರ್‌ (Deepak Chahar) ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಡ್ವೇನ್ ಬ್ರಾವೋ ಹಾಗೂ ಮಿಸ್ಟ್ರಿ ಸ್ಪಿನ್ನರ್ ಮಹೀಶ್ ತೀಕ್ಷಣ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡಬೇಕಿದೆ.

IPL 2022: ಡೆಲ್ಲಿ ಕ್ಯಾಪಿಟಲ್ಸ್‌ vs ಲಖನೌ ಸೂಪರ್ ಜೈಂಟ್ಸ್‌ ಫೈಟ್‌

ಇನ್ನು ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ಎದುರು ರೋಚಕ ಸೋಲು ಅನುಭವಿಸಿತ್ತು. ಆದರೆ ಉಮ್ರಾನ್ ಮಲಿಕ್ ಮಾರಕ ದಾಳಿ ನಡೆಸಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಅಸ್ಥಿರ ಪ್ರದರ್ಶನದೊಂದಿಗೆ ಕಂಗಾಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ ಮೇಲೆ ಸವಾರಿ ಮಾಡಲು ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಜ್ಜಾಗಿದೆ

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್(ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಾರ್ಕ್‌ ಯಾನ್ಸೆನ್, ಉಮ್ರಾನ್ ಮಲಿಕ್.

ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಮೋಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ&ವಿಕೆಟ್ ಕೀಪರ್), ಡ್ವೇನ್ ಪ್ರಿಟೋರಿಯಸ್, ಡ್ವೇನ್ ಬ್ರಾವೋ, ಮುಖೇಶ್ ಚೌಧರಿ, ಮಹೀಶ್ ತೀಕ್ಷಣ.

ಸ್ಥಳ: ಎಂಸಿಎ ಕ್ರೀಡಾಂಗಣ ಪುಣೆ, 
ಪಂದ್ಯ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್