* ಇನ್ನೊಂದು ಪಂದ್ಯ ಭಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ತೊರೆದ ಕೇನ್ ವಿಲಿಯಮ್ಸನ್‌* ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಗುಳಿದಿರುವ ಆರೆಂಜ್ ಆರ್ಮಿಗೆ ಮತ್ತೊಂದು ಶಾಕ್* ವೈಯುಕ್ತಿಕ ಕಾರಣ ನೀಡಿ ತವರಿಗೆ ವಾಪಾಸ್ಸಾದ ಕೇನ್ ವಿಲಿಯಮ್ಸನ್

ಮುಂಬೈ(ಮೇ.18): ಬಹುತೇಕ 15ನೇ ಅವೃತ್ತಿಯ ಐಪಿಎಲ್ (IPL 2022) ಟೂರ್ನಿಯ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ದಿಢೀರ್ ಎನ್ನುವಂತೆ ಆರೆಂಜ್‌ ಆರ್ಮಿ ತೊರೆದು ನ್ಯೂಜಿಲೆಂಡ್‌ಗೆ ವಾಪಾಸ್ಸಾಗಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಇನ್ನೊಂದು ಪಂದ್ಯ ಆಡುವುದು ಬಾಕಿ ಉಳಿದಿದೆ. ಹೀಗಿರುವಾಗಲೇ ವಿಲಿಯಮ್ಸನ್‌ ತವರಿಗೆ ವಾಪಸ್ಸಾಗಿದ್ದಾರೆ.

ಹೌದು, ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌(Kane Williamson), ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಕಾರಣಕ್ಕಾಗಿಯೇ ದಿಢೀರ್ ಎನ್ನುವಂತೆ ವಿಲಿಯಮ್ಸನ್‌ ತವರಿಗೆ ವಾಪಾಸ್ಸಾಗಿದ್ದಾರೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ಮೇ 22ರಂದು ವಾಂಖೇಡೆ ಮೈದಾನದಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. 

ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 3 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಕನಸನ್ನು ಕೊಂಚ ಜೀವಂತವಾಗಿರಿಸಿಕೊಂಡಿತ್ತು. ಒಂದು ವೇಳೆ ಪವಾಡ ನಡೆದರೆ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಬಹುದಾಗಿದೆ.

IPL 2022: ರೀಟೈನ್‌ ಮಾಡಿಕೊಂಡಿದ್ದ ಈ ಐವರಿಗೆ ಮುಂದಿನ ವರ್ಷ ಗೇಟ್‌ಪಾಸ್‌ ಫಿಕ್ಸ್..!

ಕೇನ್‌ ವಿಲಿಯಮ್ಸನ್‌ ತವರಿಗೆ ವಾಪಾಸ್ಸಾಗಿರುವ ಬಗ್ಗೆ ಅಧಿಕೃತವಾಗಿ ಟ್ವೀಟ್‌ ಮಾಡಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿಯು, ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ನಿರೀಕ್ಷೆಯಲ್ಲಿರುವ ನಮ್ಮ ನಾಯಕ ಕೇನ್ ವಿಲಿಯಮ್ಸನ್‌, ನ್ಯೂಜಿಲೆಂಡ್‌ಗೆ ವಾಪಾಸ್ಸಾಗಿದ್ದಾರೆ. ವಿಲಿಯಮ್ಸನ್ ಅವರ ಪತ್ನಿಗೆ ಸುರಕ್ಷಿತವಾಗಿ ಡೆಲಿವರಿಯಾಗಲಿ ಎಂದು ಸನ್‌ರೈಸರ್ಸ್‌ನ ಪ್ರತಿಯೊಬ್ಬರು ಹಾರೈಸುತ್ತಿರುವುದಾಗಿ ಟ್ವೀಟ್ ಮಾಡಿದೆ.

Scroll to load tweet…

2020ರ ಡಿಸೆಂಬರ್‌ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಸಾರಾ ರಹೀಮ್ ದಂಪತಿಯ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಇದೀಗ ಈ ಜೋಡಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಕೇನ್ ವಿಲಿಯಮ್ಸನ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಮೊಣಕೈ ಗಾಯದ ಸಮಸ್ಯೆಯಿಂದ ಗುಣಮುಖರಾದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ಕೇನ್ ವಿಲಿಯಮ್ಸನ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲು ಸಾಧ್ಯವಾಗಲಿಲ್ಲ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ 13 ಪಂದ್ಯಗಳನ್ನಾಡಿ 19.64ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 216 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ನಾಯಕರಾಗಿ ಕೂಡಾ ಈ ಬಾರಿ ಕೇನ್ ವಿಲಿಯಮ್ಸನ್‌ ವಿಫಲರಾಗಿದ್ದಾರೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.