IPL 2022 ಹಾರ್ದಿಕ್ ಪಾಂಡ್ಯ ಪವರ್ ಫುಲ್ ಬ್ಯಾಟಿಂಗ್, ರಾಜಸ್ಥಾನಕ್ಕೆ 193 ರನ್ ಟಾರ್ಗೆಟ್!

 ನಾಯಕ ಹಾರ್ದಿಕ್ ಪಾಂಡ್ಯ ಸಿಡಿಸಿದ ಮತ್ತೊಂದು ಅದ್ಭುತ ಅರ್ಧಶತಕ ಹಾಗೂ ಡೇವಿಡ್ ಮಿಲ್ಲರ್, ಕರ್ನಾಟಕದ ಅಭಿನವ್ ಮನೋಹರ್ ಸ್ಪೋಟಕ ಆಟದಿಂದ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 193 ರನ್ ಗುರಿ ನೀಡಿದೆ.

IPL 2022 RR vs GT Hardik Pandya smashes another Fifty and Gujarat Titans Post Big Total vs Rajasthan Royals san

ಮುಂಬೈ (ಏ.14): ಐಪಿಎಲ್ (IPL 2022) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ಕುತೂಹಲ ಕೆರಳಿಸಿರುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡ ರಾಜಸ್ಥಾನ ರಾಯಲ್ಸ್  (Rajasthan Royals ) ತಂಡದ ಗೆಲುವಿಗೆ ಬೃಹತ್ ಸವಾಲು ನೀಡಿದೆ. ಪಂದ್ಯದ ಕಡೆಯ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಡೇವಿಡ್ ಮಿಲ್ಲರ್ (David Miller) ಅವರ ಸ್ಫೋಟಕ ಆಟ ಗುಜರಾತ್ ಟೈಟಾನ್ಸ್ (GT) ತಂಡದ ದೊಡ್ಡ ಮೊತ್ತಕ್ಕೆ ಕಾರಣವಾಯಿತು. 

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ, ಆರಂಭದಲ್ಲಿ ಹಿನ್ನಡೆ ಕಂಡರೂ ನಾಯಕ ಹಾರ್ದಿಕ್ ಪಾಂಡ್ಯ (87 *ರನ್, 52 ಎಸೆತ, 8 ಬೌಂಡರಿ, 4 ಸಿಕ್ಸರ್) ಸಾಹಸಿಕ ಇನ್ನಿಂಗ್ಸ್ ನೆರವಿನಿಂದ 4 ವಿಕೆಟ್ ಗೆ 192 ರನ್ ಕಲೆಹಾಕಿದೆ. ಡೇವಿಡ್ ಮಿಲ್ಲರ್ (31* ರನ್, 14 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಕೊನೆಯ 25 ಎಸೆತಗಳಲ್ಲಿ 53 ರನ್ ಕಲೆಹಾಕಿತು.

ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಆರಂಭಿಕ ವಿಭಾಗದ ವೈಫಲ್ಯದಿಂದ ಸಂಕಷ್ಟಕ್ಕೆ ಒಳಗಾಗಿಯಿತು. ಫಾರ್ಮ್ ಕಂಡುಕೊಳ್ಳಲು ಒದ್ದಾಟ ನಡೆಸುತ್ತಿರುವ ಮ್ಯಾಥ್ಯೂ ವೇಡ್ 6 ಎಸೆತಗಳಲ್ಲಿ 3 ಬೌಂಡರಿ ಸಿಡಿಸಿ 12 ರನ್ ಗೆ ರನೌಟ್ ಆದರು. ಜಿಮ್ಮಿ ನೀಶಾಮ್ ಎಸೆದ ಮೊದಲ ಓವರ್ ನಲ್ಲಿಯೇ ಈ ಮೂರು ಬೌಂಡರಿಗಳನ್ನು ವೇಡ್ ಸಿಡಿಸಿದ್ದರು. ಆದರೆ, 2ನೇ ಓವರ್ ಆರಂಭವಾದ ಬೆನ್ನಿಗೆ ಮ್ಯಾಥ್ಯೂ ವೇಡ್, ರಸ್ಸಿ ವಾನ್ ಡರ್ ಅವರ ಆಕರ್ಷಕ ಫೀಲ್ಡಿಂಗ್ ಗೆ ರನೌಟ್ ಆದರು.

ವೇಡ್ ಔಟಾದ ಬಳಿಕ ಕ್ರೀಸ್ ಗಿಳಿದ ವಿಜಯ್ ಶಂಕರ್ ಹೆಚ್ಚಿನ ಶ್ರಮ ತೋರಲಿಲ್ಲ. 7 ಎಸೆತಗಳನ್ನು ಎದುರಿಸಿದ ವಿಜಯ್ ಶಂಕರ್, ಕೇವಲ 2 ರನ್ ಬಾರಿಸಿ ಕುಲದೀಪ್ ಸೆನ್ ಎಸೆತದಲ್ಲಿ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ಹೊರನಡೆದರು. 15 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಶುಭ್ ಮಾನ್ ಗಿಲ್ (13) ಹಾಗೂ ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್ ಗೆ 38 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಗುಜರಾತ್ ಟೈಟಾನ್ಸ್ ತಂಡದ ಅಗ್ರ ಕ್ರಮಾಂಕದಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಆಗಿರುವ ಶುಭ್ ಮಾನ್ ಗಿಲ್ ಪವರ್ ಪ್ಲೇ ಮುಗಿದ ಬೆನ್ನಲ್ಲಿಯೇ ರಿಯಾನ್ ಪರಾಗ್ ಎಸೆತದಲ್ಲಿ ಶಿಮ್ರೋನ್ ಹೆಟ್ಮೆಯರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ತಂಡವನ್ನು ಆಧರಿಸಿದ ಹಾರ್ದಿಕ್-ಅಭಿನವ್: 53 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಅಭಿನವ್ ಮನೋಹರ್ (43 ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) 4ನೇ ವಿಕೆಟ್ ಗೆ ಅಮೂಲ್ಯ 83 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಆಧರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ರನ್ ಬಾರಿಸಿ ತಂಡದ ನೆರವಿಗೆ ಧಾವಿಸುವ ಕರ್ನಾಟಕದ ಅಭಿನವ್ ಮನೋಹರ್ ಮತ್ತೊಮ್ಮೆ ಆಕರ್ಷಕ ಇನ್ನಿಂಗ್ಸ್ ಆಡಿದರು. ನಾಯಕನ ಜೊತೆ ನಾಯಕನ ರೀತಿಯಲ್ಲಿಯೇ ವೇಗದ ಆಟವಾಡುವ ಮೂಲಕ ಸ್ಕೋರ್ ಬೋರ್ಡ್ ನಲ್ಲಿ ರನ್ ಏರಿಸಲು ನೆರವಾದರು.

IPL 2022 ಟಾಸ್ ಗೆದ್ದ ರಾಜಸ್ಥಾನ ತಂಡದಿಂದ ಬೌಲಿಂಗ್ ಆಯ್ಕೆ, ಎರಡೂ ತಂಡದಲ್ಲಿ ಕೆಲ ಬದಲಾವಣೆ

ಮೊದಲ ಏಳು ಓವರ್ ಗಳ ಆಟದಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಟೈಟಾನ್ಸ್ ತಂಡಕ್ಕೆ ಆಕ್ರಮಣಕಾರಿ ಆಟವಾಡುವ ಮೂಲಕ ಹಾರ್ದಿಕ್ ಪಾಂಡ್ಯ ಹಾಗೂ ಅಭಿನವ್ ಮನೋಹರ್ ಚೇತರಿಕೆ ನೀಡಿದರು. ಕುಲದೀಪ್ ಸೆನ್ ಎಸೆದ 14ನೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ 2 ಬೌಂಡರಿ ಸಿಡಿಸಿದ ಪಾಂಡ್ಯ 33 ಎಸೆತಗಳಲ್ಲಿ ಅರ್ಧಶತಕ ಪೈರೂಸಿದರು. ಮರು ಓವರ್ ನಲ್ಲಿ ಅನುಭವಿ ಯಜುವೇಂದ್ರ ಚಾಹಲ್ ಗೆ ಸ್ಲಾಗ್ ಸ್ವೀಪ್ ಸಿಕ್ಸರ್ ಸಿಡಿಸಿದ ಅಭಿನವ್, ಮರು ಎಸೆತದಲ್ಲಿ ಔಟಾದರು.

IPL 2022: ಗಾಯದ ಮೇಲೆ ಬರೆ, ರೋಹಿತ್ ಶರ್ಮಾಗೆ 24 ಲಕ್ಷ ರೂ ದಂಡ..!

ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ: ಐಪಿಎಲ್ ನಲ್ಲಿ 97 ಪಂದ್ಯವಾಡಿರುವ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದರು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬಹುತೇಕವಾಗಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯಗೆ ದೊಡ್ಡ ಇನ್ನಿಂಗ್ಸ್ ಆಡುವ ಅಪರೂಪದ ಅವಕಾಶಗಳು ಸಿಗುತ್ತಿದ್ದವು. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧವೂ ಪಾಂಡ್ಯ ಅರ್ಧಶತಕ ಬಾರಿಸಿದ್ದರು.
 

Latest Videos
Follow Us:
Download App:
  • android
  • ios