* ರಾಜಸ್ಥಾನ ರಾಯಲ್ಸ್ ಸವಾಲು ಸ್ವೀಕರಿಸಲು ಸಜ್ಜಾದ ಆರ್‌ಸಿಬಿ* ಸತತ ಎರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಜಸ್ಥಾನ ರಾಯಲ್ಸ್* ಇಂದಿನ ಪಂದ್ಯಕ್ಕೂ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯ
ಮುಂಬೈ(ಏ.05): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಸೋಲಿನ ಆರಂಭ ಪಡೆದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ಸ್ (Kolkata Knight Riders) ವಿರುದ್ಧ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಂಗಳವಾರ ಬಲಿಷ್ಠ ರಾಜಸ್ಥಾನ ರಾಯಲ್ಸ್ (Rajasthan Royals) ಸವಾಲನ್ನು ಎದುರಿಸಲಿದೆ. ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ಆರ್‌ಸಿಬಿ ಜಯದ ಲಯ ಮುಂದುವರಿಸುವ ಉತ್ಸಾಹದಲ್ಲಿದೆ. ಆದರೆ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನದಿಂದ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದರೂ ಬೌಲರ್‌ಗಳ ಕಳಪೆ ಆಟದ ಪರಿಣಾಮ ಪಂದ್ಯ ಸೋತಿದ್ದ ಆರ್‌ಸಿಬಿಯನ್ನು ಕಳೆದ ಪಂದ್ಯದಲ್ಲಿ ಬೌಲರ್‌ಗಳು ಕೈಹಿಡಿದಿದ್ದರು. ರಾಜಸ್ಥಾನ ವಿರುದ್ಧ ಎರಡೂ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ದಕ್ಕಲಿದೆ.
ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಈ ಪಂದ್ಯಕ್ಕೂ ಲಭ್ಯರಿಲ್ಲ. ಆರ್‌ಸಿಬಿ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ತೋರಬೇಕಿದ್ದು, ಫಾಫ್ ಡು ಪ್ಲೆಸಿಸ್ ತಮ್ಮ ಸ್ಫೋಟಕ ಆಟ ಮುಂದುವರಿಸಬೇಕಿದೆ. ವಿರಾಟ್ ಕೊಹ್ಲಿಯಿಂದ (Virat Kohli) ದೊಡ್ಡ ಇನ್ನಿಂಗ್ಸ್‌ಗಾಗಿ ಅಭಿಮಾನಿಗಳ ಕಾಯುತ್ತಿದ್ದಾರೆ. ಅನುಜ್ ರಾವತ್, ಶಾಬಾಜ್ ಅಹ್ಮದ್, ಶೆರ್ಫಾನೆ ರುಥರ್‌ಫೋರ್ಡ್ ತಂಡ ತಮ್ಮ ಮೇಲಿಟ್ಟಿರುವ ನಂಬಿಕೆ ಉಸಿಕೊಳ್ಳಬೇಕು. ಇನ್ನು ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು, ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಎರಡು ಪಂದ್ಯಗಳಲ್ಲಿ 5 ವಿಕೆಟ್ ಕಿತ್ತಿರುವ ಶ್ರೀಲಂಕಾದ ಹಸರಂಗ ತಂಡದ ಬೌಲಿಂಗ್ ಆಧಾರಸ್ತಂಭ ಎನಿಸಿದ್ದು ಹರ್ಷಲ್ ಪಟೇಲ್ ಮತ್ತು ಮೊಹಮದ್ ಸಿರಾಜ್ ಕೂಡಾ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ. ಯುವ ಬೌಲರ್ ಆಕಾಶ್ ದೀಪ್ ಕಳೆದ ಪಂದ್ಯದ ಪ್ರದರ್ಶನ ಮುಂದುವರಿಸಬೇಕಿದೆ.
ಇನ್ನು, ಆರ್‌ಸಿಬಿಗೆ ಹೋಲಿಸಿದರೆ ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದೆ. ಮುಂಬೈ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದ ಜೋಸ್ ಬಟ್ಲರ್ ಜೊತೆ ಯಶಸ್ವಿ ಜೈಸ್ವಾಲ್, ಕನ್ನಡಿಗ ದೇವದತ್ತ ಪಡಿಕ್ಕಲ್ ಕೂಡಾ ಉತ್ತಮ ಆರಂಭ ಒದಗಿಸಲು ಎದುರು ನೋಡುತ್ತಿದ್ದಾರೆ. ಅಪೂರ್ವ ಫಾರ್ಮ್‌ನಲ್ಲಿರುವ ನಾಯಕ ಸಂಜು ಸ್ಯಾಮ್ಸನ್, ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮೇಯರ್ ಅಬ್ಬರಿಸಿದರೆ ಎದುರಾಳಿಗಳಿಗೆ ಉಳಿಗಾಲವಿಲ್ಲ. ಇನ್ನು, ಅನುಭವಿ ಆಲ್ರೌಂಡರ್ ಆರ್.ಅಶ್ವಿನ್ ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲೂ ಮತ್ತೊಮ್ಮೆ ಕೈಚಳಕ ತೋರಿಸುವ ತವಕದಲ್ಲಿದ್ದಾರೆ. ಯಜುವೇಂದ್ರ ಚಹಲ್ ತಾವು ದೀರ್ಘ ಕಾಲ ಆಡಿದ ತಂಡದ ವಿರುದ್ಧ ಹೇಗೆ ಆಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಹಾಗೂ ನವದೀಪ್ ಸೈನಿ ಮತ್ತೊಮ್ಮೆ ವೇಗದ ಬೌಲಿಂಗ್‌ನಲ್ಲಿ ಎದುರಾಳಿಗಳಿಗೆ ಕಂಟಕವಾಗುವ ಸಾಧ್ಯತೆ ಇದೆ.
IPL 2022 ಅವೇಶ್ ಖಾನ್ ದಾಳಿಗೆ ಹೈದರಾಬಾದ್ ತತ್ತರ, ಲಖನೌಗೆ 12 ರನ್ ಗೆಲುವು
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಚ ಮೇಲುಗೈ ಸಾಧಿಸಿದೆ. 24 ಪಂದ್ಯಗಳ ಪೈಕಿ ಆರ್‌ಸಿಬಿ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು. ಇನ್ನು 2 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶೆರ್ಫಾನೆ ರುಥರ್‌ಫೋರ್ಡ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್, ರಿಯಾನ್ ಪರಾಗ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
