* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದು ರಾಜಸ್ಥಾನ ರಾಯಲ್ಸ್ ಸವಾಲು* ಭರ್ಜರಿ ಫಾರ್ಮ್‌ನಲ್ಲಿರುವ ಜೋಸ್‌ ಬಟ್ಲರ್‌ ಕಟ್ಟಿ ಹಾಕಲು ಆರ್‌ಸಿಬಿ ರಣತಂತ್ರ* ಸನ್‌ರೈಸರ್ಸ್ ಎದುರಿನ ಸೋಲಿನ ಕಹಿ ಮರೆತು ಗೆಲುವಿನ ಹಳಿಗೆ ಮರಳುತ್ತಾ ಆರ್‌ಸಿಬಿ

ಪುಣೆ(ಏ.26): ಒಂದರ ಹಿಂದೆ ಒಂದು ಶತಕ ಸಿಡಿಸಿ ಭಾರೀ ‘ಜೋಶ್‌’ನಲ್ಲಿರುವ ಜೋಸ್‌ ಬಟ್ಲರ್‌ರ (Jos Buttler) ಅಬ್ಬರ ಅಡಗಿಸುವ ಉತ್ಸಾಹದೊಂದಿಗೆ ಮಂಗಳವಾರ ಕಣಕ್ಕಿಳಿಯಲಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore), ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಈ ಆವೃತ್ತಿಯಲ್ಲಿ 2ನೇ ಗೆಲುವು ದಾಖಲಿಸಿ ಪ್ಲೇ-ಆಫ್‌ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಕಾತರಿಸುತ್ತಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ನೀಡಿದ ಆಘಾತದಿಂದ ಹೊರಬರಲು ಕಾಯುತ್ತಿರುವ ಬೆಂಗಳೂರು ತಂಡಕ್ಕೆ ಮಾಜಿ ನಾಯಕ, ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿಯ (Virat Kohli) ಬ್ಯಾಟಿಂಗ್‌ ಲಯದ್ದೇ ಚಿಂತೆಯಾಗಿದೆ. ಜೊತೆಗೆ ಆರಂಭಿಕ ಅನುಜ್‌ ರಾವತ್‌ರ ಸತತ ವೈಫಲ್ಯವೂ ಹೊಸ ಆಯ್ಕೆಗಳತ್ತ ಗಮನ ಹರಿಸುವಂತೆ ಒತ್ತಡ ಹೇರುತ್ತಿದೆ.

ಆರ್‌ಸಿಬಿಯ (RCB) ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ವಿಕೆಟ್‌ ಒಪ್ಪಿಸಿ ಹೊರನಡೆಯುವುದನ್ನು ಅಭ್ಯಾಸ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆಯಲ್ಲ. ಪ್ಲೇ-ಆಫ್‌ಗೆ ರೇಸ್‌ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ತಂಡ ತನ್ನ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳು ಆಗುವ ಸಾಧ್ಯತೆ ಇದೆ.

ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್‌ ಸತತ 2 ಗೆಲುವುಗಳನ್ನು ದಾಖಲಿಸಿದ್ದು ಆಡಿರುವ ಒಟ್ಟು 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಉತ್ತಮ ಲಯದಲ್ಲಿದೆ. ಬಲಿಷ್ಠ ಬ್ಯಾಟಿಂಗ್‌, ಬೌಲಿಂಗ್‌ ಪಡೆಯನ್ನು ಹೊಂದಿರುವ ರಾಯಲ್ಸ್‌ನಿಂದ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಬಟ್ಲರ್‌ ಕೇವಲ 7 ಪಂದ್ಯಗಳಲ್ಲಿ 491 ರನ್‌ ಬಾರಿಸಿದ್ದು, ಸಂಜು ಸ್ಯಾಮ್ಸನ್‌ ಹಾಗೂ ದೇವದತ್‌ ಪಡಿಕ್ಕಲ್‌ ಸಹ ಉತ್ತಮ ಲಯದಲ್ಲಿದ್ದಾರೆ. ರಾಯಲ್ಸ್‌ನ ಮಧ್ಯಮ ಕ್ರಮಾಂಕ ಅಷ್ಟಾಗಿ ಪರೀಕ್ಷೆಗೆ ಒಳಗಾಗಿಲ್ಲ. ಹೀಗಾಗಿ ಅಗ್ರ ಕ್ರಮಾಂಕವನ್ನು ಬೇಗನೆ ಔಟ್‌ ಮಾಡಿ ರಾಜಸ್ಥಾನವನ್ನು ಒತ್ತಡಕ್ಕೆ ಸಿಲುಕಿಸುವುದು ಆರ್‌ಸಿಬಿಯ ಮುಖ್ಯ ಗುರಿಯಾಗಿರಲಿದೆ.

ಐಪಿಎಲ್‌ನಲ್ಲಿ Shikhar Dhawan 6 ಸಾವಿರ ರನ್, ಕೊಹ್ಲಿಯನ್ನು ಹಿಂಬಾಲಿಸುತ್ತಾರೆ ಗಬ್ಬರ್‌ ಸಿಂಗ್..!

ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌, ವಿರಾಟ್‌ ಕೊಹ್ಲಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಪ್ರಸಿದ್‌್ಧ ಕೃಷ್ಣ, ಯಜುವೇಂದ್ರ ಚಹಲ್‌, ಆರ್‌.ಅಶ್ವಿನ್‌ರಂತಹ ಪರಿಣಾಮಕಾರಿ ಬೌಲರ್‌ಗಳ ಎದುರು ರನ್‌ ಗಳಿಸುವುದು ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ರಾಯಲ್ಸ್‌ಗೆ 5ನೇ ಬೌಲರ್‌ಗಳ ಕೊರತೆ ಎದುರಾಗುತ್ತಿದ್ದು, ಆರ್‌ಸಿಬಿ ಇದರ ಲಾಭವೆತ್ತಲು ಎದುರು ನೋಡುವ ಸಾಧ್ಯತೆ ಇದೆ.

ಐಪಿಎಲ್‌ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಚ ಮೇಲುಗೈ ಸಾಧಿಸಿದೆ. ಆರ್‌ಸಿಬಿ ತಂಡವು 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ರಾಜಸ್ಥಾನ ರಾಯಲ್ಸ್‌ ತಂಡವು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನು 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಅನುಜ್ ರಾವತ್‌/ಮಹಿಪಾಲ್ ಲೋಮ್ರರ್‌, ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್‌, ಸುಯಶ್ ಪ್ರಭುದೇಸಾಯಿ‌, ದಿನೇಶ್ ಕಾರ್ತಿಕ್‌, ಶಾಬಾಜ್ ಅಹಮ್ಮದ್‌, ಹರ್ಷಲ್ ಪಟೇಲ್‌, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್‌, ಜೋಶ್ ಹೇಜಲ್‌ವುಡ್‌.

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್‌, ದೇವದತ್ ಪಡಿಕ್ಕಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿಮ್ರೊನ್ ಹೆಟ್ಮೇಯರ್‌, ರಿಯಾನ್ ಪರಾಗ್‌, ಕರುಣ್ ನಾಯರ್‌, ಆರ್‌.ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಒಬೆಡ್ ಮೆಕೊಯ್‌, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್‌.

ಸ್ಥಳ: ಪುಣೆ, ಎಂಸಿಎ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌