IPL 2022: ಇಂದು ಹ್ಯಾಟ್ರಿಕ್ ಸೋಲಿನ ಸರಪಳಿ ಕಳಚುತ್ತಾ ಆರ್‌ಸಿಬಿ..?
* ಆರ್‌ಸಿಬಿ ತಂಡಕ್ಕಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲು
* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಫಾಫ್ ಡು ಪ್ಲೆಸಿಸ್ ಪಡೆ
* ಎಂಸಿಎ ಮೈದಾನದಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ
ಪುಣೆ(ಮೇ.04): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 49ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಲಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಕಂಗಾಲಾಗಿರುವ ಅರ್‌ಸಿಬಿ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಆಡಿದ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಇದಾದ ಬಳಿಕ ಸತತ 3 ಪಂದ್ಯಗಳನ್ನು ಸೋಲುವ ಮೂಲಕ ಪ್ಲೇ ಆಫ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad), ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ಎದುರು ಆಘಾತಕಾರಿ ಸೋಲು ಕಂಡಿದೆ. ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ 9 ವಿಕೆಟ್‌ಗಳ ಅಂತರದ ಸೋಲು ಆರ್‌ಸಿಬಿ ನೆಟ್ ರನ್‌ರೇಟ್ ನೆಗೆಟಿವ್ ಹಂತಕ್ಕೆ ಜಾರುವಂತೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ 10 ಪಂದ್ಯಗಳನ್ನಾಡಿ ತಲಾ 5 ಗೆಲುವು ಹಾಗೂ ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಹಿಂದಿನ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್‌ಸಿಬಿ ತಂಡವು 23 ರನ್‌ಗಳ ಅಂತರದ ಸೋಲು ಅನುಭವಿಸಿತ್ತು. ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ಸಜ್ಜಾಗಿದೆ. ಆರ್‌ಸಿಬಿ ಕಳೆದ 14 ದಿನಗಳಲ್ಲಿ ಗೆಲುವನ್ನೇ ಕಂಡಿಲ್ಲ. ಸತತ 3 ಪಂದ್ಯಗಳಲ್ಲಿ ತಂಡ ಬ್ಯಾಟಿಂಗ್ ವೈಫಲ್ಯ ಕಂಡಿದ್ದು, ಹ್ಯಾಟ್ರಿಕ್ ಸೋಲು ಅನುಭವಿಸಿದೆ. ತಂಡದ ಬೌಲಿಂಗ್ ಸುಧಾರಣೆ ಕಂಡಿದ್ದರೂ, ವೇಗಿ ಮೊಹಮದ್ ಸಿರಾಜ್ ದುಬಾರಿಯಾಗುತ್ತಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
IPL 2022: ಸಿಎಸ್‌ಕೆ ಎದುರು ಆರ್‌ಸಿಬಿಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 29 ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಅರ್‌ಸಿಬಿ ತಂಡವು 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದು ಪಂದ್ಯದ ಫಲಿತಾಂಶ ಹೊರಬಿದ್ದಿರಲಿಲ್ಲ.
ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.