* ಪುಣೆಯಲ್ಲಿಂದು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆರ್‌ಸಿಬಿ ಸವಾಲು* ಹ್ಯಾಟ್ರಿಕ್ ಸೋಲಿನ ಗೆಲುವಿನ ಕನವರಿಕೆಯಲ್ಲಿದೆ ಆರ್‌ಸಿಬಿ* ಈ ಮೊದಲ ಮುಖಾಮುಖಿಯಲ್ಲಿ ಸಿಎಸ್‌ಕೆಗೆ ಶರಣಾಗಿದ್ದ ಫಾಫ್ ಡು ಪ್ಲೆಸಿಸ್ ಪಡೆ 

ಪುಣೆ(ಮೇ.04): ಹ್ಯಾಟ್ರಿಕ್‌ ಸೋಲನುಭವಿಸಿ ಪ್ಲೇ-ಆಫ್‌ ಹಾದಿ ಕಠಿಣಗೊಳಿಸಿಕೊಂಡಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) ಮತ್ತೆ ಗೆಲುವಿನ ಹಳಿಗೆ ಮರಳಲು ಹೆಣಗಾಡುತ್ತಿದ್ದು, ಬುಧವಾರ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಡು ಪ್ಲೆಸಿಸ್ (Faf du Plessis) ಪಡೆ ಗೆದ್ದರೆ ಪ್ಲೇ-ಆಫ್‌ ಆಸೆ ಜೀವಂತವಾಗಿ ಉಳಿಯಲಿದೆ. ಸೋತರೆ ತಂಡದ ಪ್ಲೇ-ಆಫ್‌ ಹಾದಿ ಇನ್ನಷ್ಟು ಕಠಿಣಗೊಳ್ಳಲಿದೆ. ಇನ್ನು ಚೆನ್ನೈಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಪ್ಲೇ-ಆಫ್‌ ಬಾಗಿಲು ಬಂದ್‌ ಆಗಲಿದೆ. ತಂಡ ಆಡಿರುವ 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, 6ರಲ್ಲಿ ಸೋತಿದೆ. ಇನ್ನೊಂದು ಸೋಲು ತಂಡವನ್ನು ಪ್ಲೇ-ಆಫ್‌ ರೇಸ್‌ನಿಂದ ಹೊರಹಾಕಲಿದೆ.

ಆರ್‌ಸಿಬಿ ಕಳೆದ 14 ದಿನಗಳಲ್ಲಿ ಗೆಲುವನ್ನೇ ಕಂಡಿಲ್ಲ. ಸತತ 3 ಪಂದ್ಯಗಳಲ್ಲಿ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದು, ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ತಂಡದ ಬೌಲಿಂಗ್‌ ಸುಧಾರಣೆ ಕಂಡಿದ್ದರೂ, ವೇಗಿ ಮೊಹಮದ್‌ ಸಿರಾಜ್‌ ದುಬಾರಿಯಾಗುತ್ತಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನಾಯಕ ಫಾಫ್‌ ಡು ಪ್ಲೆಸಿಸ್ ಈ ಆವೃತ್ತಿಯಲ್ಲಿ ಗಳಿಸಿರುವ 278 ರನ್‌ಗಳ ಪೈಕಿ 184 ರನ್‌ಗಳು ಕೇವಲ 2 ಇನ್ನಿಂಗ್ಸ್‌ಗಳಲ್ಲಿ ದಾಖಲಾಗಿವೆ. 10 ಇನ್ನಿಂಗ್ಸ್‌ಗಳಲ್ಲಿ ಅವರು 5 ಬಾರಿ ಒಂದಂಕಿ ಮೊತ್ತಕ್ಕೆ ಔಟ್‌ ಆಗಿದ್ದಾರೆ. ವಿರಾಟ್‌ ಕೊಹ್ಲಿ ಆರಂಭಿಕನಾಗಿ ಆಡಲು ಶುರು ಮಾಡಿದ್ದು, ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ ಅವರು ತಮ್ಮ ಸ್ಟ್ರೈಕ್‌ ರೇಟ್‌ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ರಜತ್‌ ಪಾಟೀದಾರ್‌ ಭರವಸೆ ಮೂಡಿಸಿದ್ದು, ಲಯ ಮುಂದುವರಿಸಬೇಕಿದೆ.

ಜಡೇಜಾ ಭೀತಿ: ನಾಯಕತ್ವದ ಭಾರವನ್ನು ತಮ್ಮ ಹೆಗಲಿನಿಂದ ಕೆಳಗಿಳಿಸಿರುವ ರವೀಂದ್ರ ಜಡೇಜಾ (Ravindra Jadeja), ಕಳೆದ ಪಂದ್ಯದಲ್ಲಿ 18 ಎಸೆತಗಳಲ್ಲಿ ಕೇವಲ 15 ರನ್‌ ನೀಡಿದ್ದರು. ಐಪಿಎಲ್‌ನಲ್ಲಿ 13 ಮುಖಾಮುಖಿಗಳಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು 7 ಬಾರಿ ಔಟ್‌ ಮಾಡಿರುವ ಜಡೇಜಾ, ಮತ್ತೊಂದು ಹಣಾಹಣಿಗೆ ಕಾಯುತ್ತಿದ್ದಾರೆ. ಜಡ್ಡು ಹಾಗೂ ಮಹೀಶ್‌ ತೀಕ್ಷಣ ವಿರುದ್ಧ ಮಧ್ಯ ಓವರ್‌ಗಳಲ್ಲಿ ರನ್‌ ಗಳಿಸುವುದು ಆರ್‌ಸಿಬಿ ಮುಂದಿರುವ ಸವಾಲು. ಇನ್ನು 16 ಟಿ20ಯಲ್ಲಿ ಕೊಹ್ಲಿಯನ್ನೂ ಜಡೇಜಾ 3 ಬಾರಿ ಔಟ್‌ ಮಾಡಿದ್ದು, ಜಡ್ಡು ಎದುರು ಕೊಹ್ಲಿ ಕೇವಲ 108ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಇದೇ ವೇಳೆ, ಆರ್‌ಸಿಬಿ ವಿರುದ್ಧ ಎಂ.ಎಸ್‌.ಧೋನಿ ಐಪಿಎಲ್‌ನಲ್ಲಿ 46 ಸಿಕ್ಸರ್‌ ಸಿಡಿಸಿದ್ದು, ಅವರ ಭೀತಿ ಬೆಂಗಳೂರು ತಂಡಕ್ಕೆ ಇದ್ದೇ ಇದೆ.

IPL 2022 ಪಂಜಾಬ್ ತಂಡದ ರನ್ ರೇಟ್ ಬೇಟೆ, ಆರ್ ಸಿಬಿಯನ್ನು ಇಳಿಸಿ 5ನೇ ಸ್ಥಾನಕ್ಕೇರಿದ ಕಿಂಗ್ಸ್!

ಬ್ರಾವೋ ಅಥವಾ ಅಲಿಗೆ ಸ್ಥಾನ?: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಡ್ವೇನ್‌ ಬ್ರಾವೋ ಹಾಗೂ ಮೋಯಿನ್‌ ಅಲಿ ಪೈಕಿ ಒಬ್ಬರಿಗೆ ಈ ಪಂದ್ಯದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಮಿಚೆಲ್‌ ಸ್ಯಾಂಟ್ನರ್‌ ಹೊರಗುಳಿಯಬೇಕಾಬಹುದು. ಋುತುರಾಜ್‌, ಕಾನ್‌ವೇ ಲಯಕ್ಕೆ ಮರಳಿರುವುದು ಚೆನ್ನೈ ಆತ್ಮವಿಶ್ವಾಸ ಹೆಚ್ಚಿಸಿದ್ದು, ಉತ್ತಪ್ಪ ಹಾಗೂ ರಾಯುಡು ಎಷ್ಟು ಅಪಾಯಕಾರಿ ಎನ್ನುವುದು ಆರ್‌ಸಿಬಿಗೆ ತಿಳಿದಿದೆ. ಆರ್‌ಸಿಬಿ ಬೌಲರ್‌ಗಳಿಗೆ ಮತ್ತೊಂದು ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 29 ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಅರ್‌ಸಿಬಿ ತಂಡವು 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದು ಪಂದ್ಯದ ಫಲಿತಾಂಶ ಹೊರಬಿದ್ದಿರಲಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ರಜತ್ ಪಾಟೀದಾರ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್‌, ಮಹಿಪಾಲ್ ಲೊಮ್ರೊರ್‌, ಶಾಬಾಜ್ ಅಹಮ್ಮದ್‌, ವನಿಂದು ಹಸರಂಗ, ಹರ್ಷಲ್ ಪಟೇಲ್‌, ಮೊಹಮ್ಮದ್ ಸಿರಾಜ್‌, ಜೋಶ್ ಹೇಜಲ್‌ವುಡ್‌.

ಚೆನ್ನೈ: ಋುತುರಾಜ್ ಗಾಯಕ್ವಾಡ್‌, ಡೆವೊನ್ ಕಾನ್‌ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್‌/ ಮೋಯಿನ್ ಅಲಿ/ಡ್ವೇನ್ ಬ್ರಾವೋ, ಡ್ವೇನ್ ಪ್ರಿಟೋರಿಯಸ್‌, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ‌, ಸಿಮರ್‌ಜಿತ್ ಸಿಂಗ್‌.

ಸ್ಥಳ: ಎಂಸಿಎ ಕ್ರೀಡಾಂಗಣ ಪುಣೆ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ್‌: ಸ್ಟಾರ್‌ ಸ್ಪೋರ್ಟ್ಸ್