IPL 2022 ವ್ಯರ್ಥವಾದ ಆರ್ ಸಿಬಿ ಹೋರಾಟ, ಮೊದಲ ಗೆಲುವು ಕಂಡ ಚೆನ್ನೈ

ಶಾಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ ಹಾಗೂ ದಿನೇಶ್ ಕಾರ್ತಿಕ್ ಇನ್ನಿಂಗ್ಸ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟುವ ವಿಶ್ವಾಸದಲ್ಲಿದ್ದ ಆರ್ ಸಿಬಿ, ಪ್ರಮುಖ ಹಂತದಲ್ಲಿ ವಿಕೆಟ್ ಕಳೆದುಕೊಂಡು 23 ರನ್  ಸೋಲಿಗೆ ಶರಣಾಯಿತು.

IPL 2022 Robin Uthappa Shivam Dube and Bowlers Help Chennai Super Kings to Beat Royal Challengers Bangalore san

ಮುಂಬೈ (ಏ. 12): 18ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಔಟಾಗುವವರೆಗೂ ಗೆಲುವಿನ ನಿರೀಕ್ಷೆ ಇರಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 23 ರನ್ ಗಳ ಸೋಲು ಕಂಡಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್, (CSK) ಕೊನೆಗೂ ಜಯದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ,  ಆರಂಭಿಕ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ (88ರನ್, 50 ಎಸೆತ, 4 ಬೌಂಡರಿ, 9 ಸಿಕ್ಸರ್ ) ಹಾಗೂ ಶಿವಂ ದುಬೆ (94 ರನ್, 46 ಎಸತ, 5 ಬೌಂಡರಿ, 8 ಸಿಕ್ಸರ್ ) ಆಡಿದ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ 5 ವಿಕೆಟ್ ಗೆ 215 ಮೊತ್ತ ಕಲೆಹಾಕಿತ್ತು. ಪ್ರತಿಯಾಗಿ ಆರ್ ಸಿಬಿ (RCB), ಹೋರಾಟದ ಆಟವಾಡಿದರೂ 9 ವಿಕೆಟ್ ಗೆ 193 ರನ್ ಸೇರಿಸಿ ಸೋಲು ಕಂಡಿತು. ಆಕರ್ಷಕ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಇದ್ದ 34 ರನ್ ಪೇರಿಸಿ 18ನೇ ಓವರ್ ನಲ್ಲಿ ಔಟಾದ ವೇಳೆ ಆರ್ ಸಿಬಿ ತಂಡ ಸೋಲೂ ಖಚಿತಗೊಂಡಿತ್ತು.

ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಆರ್ ಸಿಬಿ ಯಾವ ಹಂತದಲ್ಲೂ ಮೊತ್ತ ಬೆನ್ನಟ್ಟಬಹುದಾದ ಛಾತಿ ತೋರಿಸಲಿಲ್ಲ. ಬೌಲಿಂಗ್ ನಲ್ಲಿ ತೀರಾ ಧಾರಾಳವಾಗಿ ರನ್ ಬಿಟ್ಟುಕೊಟ್ಟು ಕುಗ್ಗಿ ಹೋಗಿದ್ದ ತಂಡಕ್ಕೆ, ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್ ನಿಂದಲೇ ಸ್ಪಿನ್ ಟೆಸ್ಟ್ ನೀಡಲು ಆರಂಭಿಸಿತು. ಮೊಯಿನ್ ಅಲಿ ಎಸೆದ ಮೊದಲ ಓವರ್ ನಲ್ಲಿ ಕೇವಲ 1 ರನ್ ಗಳಿಸಿದ ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ ಜೋಡಿ 3ನೇ ಓವರ್ ವೇಳೆಗೆ ಬೇರ್ಪಟ್ಟಿತು. ಪವರ್ ಪ್ಲೇ ಅವಧಿಯಲ್ಲಿ ಸ್ಪಿನ್ನರ್ ಗಳ ದಾಳಿಯನ್ನೇ ಹೆಚ್ಚಾಗಿ ಬಳಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಅದರ ಲಾಭವನ್ನೂ ಪಡೆದುಕೊಂಡಿತು.

ಮೊದಲ ಆರು ಓವರ್ ಗಳ ಆಟದಲ್ಲಿ ಆರ್ ಸಿಬಿ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್ (8) ಹಾಗೂ ಅನುಜ್ ರಾವತ್ (12) ವಿಕೆಟ್ ಗಳನ್ನು ಶ್ರೀಲಂಕಾದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ ಉರುಳಿಸಿ ಗಮನಸೆಳೆದರೆ, ಇವರಿಗೆ ಉತ್ತಮ ಸಾಥ್ ನೀಡಿದ ಮೊಯಿನ್ ಅಲಿ ಈ ಅವಧಿಯಲ್ಲಿ ಎಸೆದ 2 ಓವರ್ ಗಳಿಂದ ಕೇವಲ 7 ರನ್ ನೀಡಿದ್ದರು. ಇನ್ನೊಂದೆಡೆ, 3 ಎಸೆತಗಳಲ್ಲಿ 1 ರನ್ ಸಿಡಿಸಿದ್ದ ಅನುಭವಿ ಆಟಗಾರ ವಿರಾಟ್ ಕೊಹ್ಲಿಯ ವಿಕೆಟ್ ಅನ್ನು ಮುಖೇಶ್ ಚೌಧರಿ ಉರುಳಿಸುವುದರೊಂದಿಗೆ ಆರ್ ಸಿಬಿ ಮೊದಲ 6 ಓವರ್ ಗಳಲ್ಲಿ 42 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು.

ಬಹುತೇಕ ಆರ್ ಸಿಬಿಯ ಸೋಲು ಖಚಿತವಾಗಿದ್ದರೂ ಗ್ಲೆನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್ ಗೆ ಇಳಿದಿದ್ದ ಮ್ಯಾಕ್ಸ್ ವೆಲ್11 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 26 ರನ್ ಸಿಡಿಸಿ ನಿರೀಕ್ಷೆ ಮೂಡಿಸಿದ್ದರು. ತಂಡದ ಮೊತ್ತ 50 ರನ್ ಗಡಿ ಮುಟ್ಟಿದ ವೇಳೆ, ಜಡೇಜಾ ಎಸೆದಲ್ಲಿ ಮ್ಯಾಕ್ಸ್ ವೆಲ್ ಔಟಾದಾಗ ಆರ್ ಸಿಬಿ ಗೆಲುವಿನ ಆಸೆಯನ್ನು ಕೈಬಿಟ್ಟಿತ್ತು. 

IPL 2022 ಕೊನೇ 60 ಎಸೆತಗಳಲ್ಲಿ 156 ರನ್ !, ಚೆನ್ನೈ ಆಟಕ್ಕೆ ಬೆಚ್ಚಿದ ಆರ್ ಸಿಬಿ!

ಹೋರಾಡಿದ ಸುಯಶ್-ಶಾಬಾಜ್: 50 ರನ್ ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 5ನೇ ವಿಕೆಟ್ ಗೆ ಗೋವಾದ ಯುವ ಬ್ಯಾಟ್ಸ್ ಮನ್ ಸುಯಶ್ ಪ್ರಭುದೇಸಾಯಿ (34ರನ್, 18 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಶಾಬಾಜ್ ಅಹ್ಮದ್ (41 ರನ್, 27 ಎಸೆತ, 4 ಬೌಂಡರಿ) ಬಿರುಸಿನ 60 ರನ್ ಜೊತೆಯಾಟವಾಡಿ ಹೋರಾಟವನ್ನು ಕೆಲ ಹೊತ್ತು ಜೀವಂತವಾಗಿರಿಸಿದ್ದರು. ಈ ಜೊತೆಯಾಟ ಇನ್ನೊಂದಷ್ಟು ಓವರ್ ಗಳ ಕಾಲ ವಿಸ್ತರಿಸಿದ್ದರೆ, ಬಹುಶಃ ಆರ್ ಸಿಬಿ ಗೆಲುವಿನ ನಿರೀಕ್ಷೆ ಮಾಡಬಹುದಿತ್ತು. 13ನೇ ಓವರ್ ನಲ್ಲಿ ಮತ್ತೆ ದಾಳಿಗಿಳಿದ ಮಹೇಶ್ ತೀಕ್ಷಣ, ಸುಯಶ್ ವಿಕೆಟ್ ಉರುಳಿಸಿದರೆ ನಂತರದ ಕೆಲ ಎಸೆತಗಳಲ್ಲಿ ಶಾಬಾಜ್ ಅಹ್ಮದ್ ಅವರ ವಿಕೆಟ್ ಅನ್ನೂ ಉರುಳಿಸುವ ಮೂಲಕ ಆರ್ ಸಿಬಿ ಜಯದ ಆಸೆಗೆ ಪೆಟ್ಟು ನೀಡಿದ್ದರು.

IPL 2022 ಚೆನ್ನೈ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಬದಲಾವಣೆ!

ನಂತರ ಒಂದೇ ಓವರ್ ನಲ್ಲಿ ರವೀಂದ್ರ ಜಡೇಜಾ ವಾನಿಂದು ಹಸರಂಗ ಹಾಗೂ ಆಕಾಶ್ ದೀಪ್ ವಿಕೆಟ್ ಗಳನ್ನು ಉರುಳಿಸಿದರು. ಅದರಲ್ಲೂ ಆಕಾಶ್ ದೀಪ್ ವಿಕೆಟ್ ಗಳನ್ನು ಉರುಳಿಸುವಲ್ಲಿ ಜಡೇಜಾ ಬೌಲಿಂಗ್ ಗಿಂತ ಅಂಬಟಿ ರಾಯುಡು ಅವರ ಆಕರ್ಷಕ ಫೀಲ್ಡಿಂಗ್ ಕಾರಣವಾಗಿತ್ತು. ಶಾರ್ಟ್ ಕವರ್ ನಲ್ಲಿ ರಾಯುಡು, ಮೂರೇ ಬೆರಳಿನಲ್ಲಿ ಡೈವ್ ಮಾಡಿ ಹಿಡಿದ ಕ್ಯಾಚ್ ಅದ್ಭುತವಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಹೇಶ್ ತೀಕ್ಷಣ 33 ರನ್ ಗೆ 4 ವಿಕೆಟ್ ಉರುಳಿಸಿ ಮಿಂಚಿದರೆ, ರವೀಂದ್ರ ಜಡೇಜಾ 39 ರನ್ ನೀಡಿ 3 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಗಮನಸೆಳೆದರು.

Latest Videos
Follow Us:
Download App:
  • android
  • ios