Asianet Suvarna News Asianet Suvarna News

IPL 2022: ಮ್ಯಾಕ್ಸ್‌ವೆಲ್‌ RCB ಪರ ಕಣಕ್ಕಿಳಿಯೋದು ಯಾವಾಗ? ಮೈಕ್ ಹೆಸನ್ ಹೇಳಿದ್ದೇನು..?

* ರಾಜಸ್ಥಾನ ರಾಯಲ್ಸ್‌ ಎದುರು ಕಣಕ್ಕಿಳಿಯಲು ಸಜ್ಜಾದ ಆರ್‌ಸಿಬಿ

* ರಾಜಸ್ಥಾನ ಎದುರಿನ ಪಂದ್ಯಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್‌ ಅಲಭ್ಯ

* ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿದ ಷರತ್ತಿನಿಂದಾಗಿ ಮ್ಯಾಕ್ಸಿ ಅಲಭ್ಯ

IPL 2022 RCB Star All Rounder Glenn Maxwell will be available only from April 9 says Mike Hesson kvn
Author
Bengaluru, First Published Apr 5, 2022, 12:36 PM IST

ಮುಂಬೈ(ಏ.05): ಚೊಚ್ಚಲ ಐಪಿಎಲ್(IPL 2022) ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದೆ. ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ಆರ್‌ಸಿಬಿ ತಂಡವು ಈಗಾಗಲೇ ಎರಡು ಪಂದ್ಯಗಳನ್ನಾಡಿದ್ದು, ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಸೆಣಸಾಡಲು ಸಜ್ಜಾಗಿದೆ. ಇಲ್ಲಿನ ವಾಂಖೆಡೆ ಮೈದಾನದಲ್ಲಿಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ (Glenn Maxwell) ಅಲಭ್ಯರಾಗಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯವನ್ನು ಕೂಡಿಕೊಂಡು, ಕ್ವಾರಂಟೈನ್ ಅವಧಿ ಪೂರೈಸಿದ್ದರೂ ಸಹಾ ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಕುರಿತಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್‌ ಮೈಕ್ ಹೆಸನ್‌ (Mike Hesson) ತುಟಿಬಿಚ್ಚಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ವಿಧಿಸಿದ ಷರತ್ತಿನಿಂದಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌, ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಹೆಸನ್ ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರು 2022ರ ಏಪ್ರಿಲ್ 06ರವರೆಗೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಎನ್ನುವ ಷರತ್ತನ್ನು ವಿಧಿಸಿದೆ. ಮುಖ್ಯವಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸದ್ಯ ಪಾಕಿಸ್ತಾನ ಪ್ರವಾಸದಲ್ಲಿದ್ದು, ಏಪ್ರಿಲ್ 05ರಂದು ಪಾಕಿಸ್ತಾನ ಎದುರು ಏಕೈಕ ಟಿ20 ಪಂದ್ಯವನ್ನಾಡಲಿದೆ. ಲಾಹೋರ್‌ನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯನ್ನು ಮುಗಿಸಿಕೊಂಡು ಆಸೀಸ್‌ ಆಟಗಾರರು ನೇರವಾಗಿ ಭಾರತಕ್ಕೆ ಬಂದಿಳಿದು ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ವಿವಾಹದ ಕಾರಣದಿಂದಾಗಿ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ, ಹೀಗಿದ್ದೂ ಕೇಂದ್ರಿಯ ಗುತ್ತಿಗೆ ಪಡೆದಿರುವುದರಿಂದ ಮ್ಯಾಕ್ಸಿ ಇಂದು(ಏ.05) ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ.

ಕೇಂದ್ರೀಯ ಗುತ್ತಿಗೆ ಪಡೆದ ಅಸ್ಟ್ರೇಲಿಯಾದ ಆಟಗಾರರು ಏಪ್ರಿಲ್ 06ರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಲಭ್ಯವಿರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈ ಮೊದಲೇ ಸೂಚನೆ ನೀಡಿತ್ತು. ಹೀಗಾಗಿ ಯಾವ ಆಟಗಾರ ಎಷ್ಟು ಮುಂಚಿತವಾಗಿ ತಂಡ ಕೂಡಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ನಾವು ಇದರ ಬಗ್ಗೆ ಮೊದಲೇ ಯೋಜನೆಗಳನ್ನು ರೂಪಿಸಿದ್ದೇವೆ. ಗ್ಲೆನ್ ಮ್ಯಾಕ್ಸ್‌ವೆಲ್ ಏಪ್ರಿಲ್ 09ರಿಂದ ನಮ್ಮ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಮೈಕ್ ಹೆಸನ್ ಹೇಳಿದ್ದಾರೆ.  

IPL 2022: ಆರ್‌ಸಿಬಿ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್‌ ಸವಾಲು..!

ಕೆಲ ದಿನಗಳ ಹಿಂದಷ್ಟೇ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಶುಕ್ರವಾರ ಮುಂಬೈಗೆ ಬಂದಿಳಿದು ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚೆನ್ನೈ ಮೂಲದ ಯುವತಿ ವಿನಿ ರಾಮನ್ ಜತೆಗೆ ಡೇಟಿಂಗ್ ನಡೆಸುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ವಿವಾಹದ ಕಾರಣದಿಂದಾಗಿ ಮ್ಯಾಕ್ಸ್‌ವೆಲ್‌, ಆರ್‌ಸಿಬಿ ಪರ ಮೊದಲೆರಡು ಪಂದ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. 

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ತಂಡಕ್ಕೆ ಆಸರೆಯಾಗಿದ್ದರು. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯತಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ಪಂದ್ಯಗಳನ್ನಾಡಿದ್ದು, ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಆಘಾತಕಾರಿ ಸೋಲು ಕಂಡಿದ್ದರೆ, ಎರಡನೇ ಪಂದ್ಯದಲ್ಲಿ ಕೆಕೆಆರ್ ಎದುರು ಭರ್ಜರಿ ಗೆಲುವು ದಾಖಲಿಸಿದೆ.

Follow Us:
Download App:
  • android
  • ios