* ಪಂಜಾಬ್ ಕಿಂಗ್ಸ್‌ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್‌ ಸವಾಲು* ಪ್ಲೇ ಆಫ್‌ ಪ್ರವೇಶಿಸುವ ದೃಷ್ಠಿಯಿಂದ ಮಾಡು ಇಲ್ಲವೇ ಮಡಿ ಪಂದ್ಯ* ರಾಜಸ್ಥಾನ ರಾಯಲ್ಸ್‌-ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯಕ್ಕೆ ವಾಂಖೇಡೆ ಮೈದಾನ ಆತಿಥ್ಯ 

ಮುಂಬೈ(ಮೇ.07): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 52ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ಪಂಜಾಬ್ ಕಿಂಗ್ಸ್‌ (Punjab Kings) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಲ್ಲಿ ಈ ಪಂದ್ಯವು ಸಾಕಷ್ಟು ಮಹತ್ವದ್ದಾಗಿದ್ದು, ಈ ಜಿದ್ದಾಜಿದ್ದಿನ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ.

ನಿರ್ಣಾಯಕ ಹಂತದಲ್ಲಿ ಸತತ 2 ಸೋಲು ಅನುಭವಿಸಿ ಆತಂಕಕ್ಕೀಡಾಗಿರುವ ರಾಜಸ್ಥಾನ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ ಶನಿವಾರ ಆಡಲಿದ್ದು ತನ್ನ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎದುರು ನೋಡುತ್ತಿದೆ. ಪ್ಲೇ-ಆಫ್‌ ರೇಸ್‌ ತ್ರೀವ್ರಗೊಳ್ಳುತ್ತಿದ್ದು, ಇನ್ನೊಂದು ಸೋಲು ರಾಜಸ್ಥಾನದ ಲೆಕ್ಕಾಚಾರವನ್ನು ತಲೆಕೆಳಗಾಗಿಸಲಿದೆ. ಇನ್ನು ಕಳೆದ ಪಂದ್ಯದ ಗೆಲುವು ಪಂಜಾಬ್‌ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ ಸ್ಥಾನಕ್ಕಾಗಿ ತಂಡಗಳ ನಡುವಿನ ಪೈಪೋಟಿ ಇನ್ನಷ್ಟು ಹೆಚ್ಚಾಗಲಿದೆ. ಜೋಸ್‌ ಬಟ್ಲರ್‌ ಅಬ್ಬರವನ್ನು ತಡೆಯಲು ಬೇಕಿರುವ ಅಸ್ತ್ರಗಳನ್ನು ಪಂಜಾಬ್‌ ಸಿದ್ಧಗೊಳಿಸಿಕೊಳ್ಳಬೇಕಿದೆ.

ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಟಾಪ್ 4 ಪಟ್ಟಿಯೊಳಗೆ ಸ್ಥಾನ ಪಡೆದಿರುವ ರಾಜಸ್ಥಾನ ರಾಯಲ್ಸ್‌ ತಂಡವು ಇದೀಗ ಸತತ ಎರಡು ಸೋಲು ಕಾಣುವ ಮೂಲಕ ತಮ್ಮ ಗೆಲುವಿನ ಲಯ ತಪ್ಪಿದೆ. ಸದ್ಯ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆಯಾದರೂ ಇನ್ನೊಂದು ಸೋಲು ಪ್ಲೇ ಆಫ್‌ ಹಾದಿಯನ್ನು ದುರ್ಗಮಗೊಳಿಸುವ ಸಾಧ್ಯತೆಯಿದೆ. ರಾಜಸ್ಥಾನ ರಾಯಲ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್ ಹಾಗೂ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಹಲ್‌ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರಿಂದ ದೊಡ್ಡ ಮಟ್ಟದ ಪ್ರದರ್ಶನ ಮೂಡಿ ಬರದೇ ಇದ್ದಿರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ.

IPL 2022 ಕೊನೇ ಓವರ್ ನಲ್ಲಿ 9 ರನ್ ರಕ್ಷಿಸಿಕೊಂಡು ಗೆಲುವು ಕಂಡ ಮುಂಬೈ!

ರಾಜಸ್ಥಾನ ರಾಯಲ್ಸ್‌ ಪರ ಮೊದಲ 7 ಪಂದ್ಯಗಳಲ್ಲಿ ಜೋಸ್ ಬಟ್ಲರ್‌ 491 ರನ್ ಸಿಡಿಸಿದ್ದರು, ಆದರೆ ಕಳೆದ ಮೂರು ಪಂದ್ಯಗಳಿಂದ ಬಟ್ಲರ್ ಬ್ಯಾಟಿಂದ ಕೇವಲ 97 ರನ್‌ಗಳು ಮಾತ್ರ ಬಂದಿವೆ. ಇನ್ನೊಂದೆಡೆ ಯುಜುವೇಂದ್ರ ಚಹಲ್ ಕೂಡಾ ಮೊದಲ 7 ಇನಿಂಗ್ಸ್‌ಗಳಲ್ಲಿ 18 ವಿಕೆಟ್ ಕಬಳಿಸಿದ್ದರು, ಆದರೆ ಕಳೆದ ಮೂರು ಇನಿಂಗ್ಸ್‌ಗಳಿಂದ ಚಹಲ್ ಗಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ. ಈ ಇಬ್ಬರು ಆಟಗಾರರ ಜತೆಗೆ ನಾಯಕ ಸಂಜು ಸ್ಯಾಮ್ಸನ್, ಶಿಮ್ರೊನ್‌ ಹೆಟ್ಮೇಯರ್ ಬ್ಯಾಟಿಂಗ್‌ನಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್‌, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಸೆನ್‌ ಕೂಡ ಮಿಂಚ ಬೇಕಿದೆ.

ಇನ್ನೊಂದೆಡೆ ಪಂಜಾಬ್ ಕಿಂಗ್ಸ್‌ ತನ್ನ ಅಸ್ಥಿರ ಪ್ರದರ್ಶನದ ಮೂಲಕ ಪ್ಲೇ ಆಫ್‌ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಸದ್ಯ ಪಂಜಾಬ್ 10 ಪಂದ್ಯಗಳನ್ನಾಡಿ ತಲಾ 5 ಗೆಲುವು ಹಾಗೂ ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನೊಂದು ಸೋಲು ಪಂಜಾಬ್ ಪ್ಲೇ ಆಫ್‌ ಕನಸಿಗೆ ತಣ್ಣೀರೆರಚುವ ಸಾಧ್ಯತೆಯಿದೆ. ಪಂಜಾಬ್ ಪರ ಧವನ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭ ಒದಗಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಏಯ್ಡನ್ ಮಾರ್ಕ್‌ರಮ್‌, ಜಾನಿ ಬೇರ್‌ಸ್ಟೋವ್, ಭನುಕಾ ರಾಜಪಕ್ಸಾ ಅವರಿಂದ ಮತ್ತೊಂದು ದೊಡ್ಡ ಇನಿಂಗ್ಸ್ ನಿರೀಕ್ಷಿಸಲಾಗುತ್ತಿದೆ. ಬೌಲಿಂಗ್‌ನಲ್ಲಿ ಕಗಿಸೋ ರಬಾಡ, ಆರ್ಶದೀಪ್ ಸಿಂಗ್, ರಾಹುಲ್ ಚಹರ್ ಮಿಂಚಿದರೆ, ಪಂಜಾಬ್‌ ಕಿಂಗ್ಸ್‌ ಮತ್ತೊಂದು ಗೆಲುವು ದಾಖಲಿಸುವುದು ಕಷ್ಟವೇನಲ್ಲ.

ಸ್ಥಳ: ಮುಂಬೈ, ವಾಂಖೇಡೆ ಸ್ಟೇಡಿಯಂ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌