IPL 2022 ಕೊನೇ ಓವರ್ ನಲ್ಲಿ 9 ರನ್ ರಕ್ಷಿಸಿಕೊಂಡು ಗೆಲುವು ಕಂಡ ಮುಂಬೈ!
ಕೊನೇ ಓವರ್ ನಲ್ಲಿ 9 ರನ್ ಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಡೇನಿಯಲ್ ಸ್ಯಾಮ್ಸ್, ಮುಂಬೈ ಇಂಡಿಯನ್ಸ್ ತಂಡಕ್ಕೆ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಅತ್ಯಂತ ರಂಜನೀಯ ಗೆಲುವು ನೀಡಿದ್ದಾರೆ. ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ 5 ರನ್ ಗಳ ಗೆಲುವು ಕಂಡಿತು.
ಮುಂಬೈ (ಮೇ. 6): ತನ್ನ ಶೋಚನೀಯ ನಿರ್ವಹಣೆಯಿಂದ ಸುದ್ದಿಯಾಗಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಹಾಲಿ ಆವೃತ್ತಿಯ ತನ್ನ ರಂಜನೀಯ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಗೆಲುವು ಕಂಡಿದ್ದ ಮುಂಬೈ ಇಂಡಿಯನ್ಸ್ ಶುಕ್ರವಾರ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 5 ರನ್ ಗಳ ರೋಚಕ ಗೆಲುವು ಕಂಡಿದೆ.
ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಅವರ ಉತ್ತಮ ಆರಂಭಿಕ ಜೊತೆಯಾಟದ ಬಳಿಕ 6 ವಿಕೆಟ್ ಗೆ 177 ರನ್ ಕಲೆಹಾಕಿತು. ಕೊನೇ ಹಂತದಲ್ಲಿ ಟಿಮ್ ಡೇವಿಡ್ (44 *ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) ಅದ್ಭುತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಗೆ 177 ರನ್ ಬಾರಿಸಿತ್ತು.
ಪ್ರತಿಯಾಗಿ ಗುಜರಾತ್ ಟೈಟಾನ್ಸ್ ತಂಡ ಮೊದಲ ವಿಕೆಟ್ ಗೆ ವೃದ್ಧಿಮಾನ್ ಸಾಹ (55ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಶುಭ್ ಮಾನ್ ಗಿಲ್ (52 ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಆಡಿದ 106 ರನ್ ಗಳ ಅಮೋಘ ಜೊತೆಯಾಟದಿಂದ ಗೆಲುವಿನ ಹಾದಿಯಲ್ಲಿತ್ತು. ಆದರೆ, ಕೊನೇ ಓವರ್ ನಲ್ಲಿ ಡೇನಿಯಲ್ ಸ್ಯಾಮ್ಸ್ 9 ರನ್ ಗಳನ್ನ ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ಗುಜರಾತ್ ಟೈಟಾನ್ಸ್ 5 ವಿಕೆಟ್ ಗೆ 172 ರನ್ ಬಾರಿಸಿ ಸೋಲು ಕಂಡಿತು.
ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ವೃದ್ಧಿಮಾನ್ ಸಾಹ ಹಾಗೂ ಶುಭ್ ಮಾನ್ ಗಿಲ್ ಜೋಡಿ ಉತ್ತಮ ಆರಂಭ ನೀಡಿತು.. ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ತೀರಾ ದುರ್ಬಲವಾಗಿರುವ ಲಾಭ ಪಡೆದುಕೊಂಡ ಈ ಜೋಡಿ ಬಹುತೇಕ ಎಲ್ಲಾ ಬೌಲರ್ ಗಳನ್ನು ದಂಡಿಸಿತು. ಜಸ್ ಪ್ರೀತ್ ಬುಮ್ರಾ ಎಸೆದ ಮೊದಲ ಎರಡು ಓವರ್ ಗಳಲ್ಲಿ 9 ಎಸೆತಗಳನ್ನು ಎದುರಿಸಿದ ವೃದ್ಧಿಮಾನ್ ಸಾಹ 25 ರನ್ ಗಳನ್ನು ಸಿಡಿಸಿದರು. ಯಾವುದೇ ಟಿ20 ಪಂದ್ಯದಲ್ಲಿ ಬುಮ್ರಾ ಅವರ ಪವರ್ ಪ್ಲೇ ಯ ಮೊದಲ ಎರಡು ಓವರ್ ಗಳಲ್ಲಿ ಇಷ್ಟು ರನ್ ಗಳನ್ನು ಸಿಡಿಸಿದ್ದು ಇದೇ ಮೊದಲು. ಒಟ್ಟಾರೆ ಪವರ್ ಪ್ಲೇಯ ಮೊದಲ ಐದು ಓವರ್ ಗಳಲ್ಲಿ 22 ಎಸೆತಗಳನ್ನು ಎದುರಿಸಿದ ವೃದ್ಧಿಮಾನ ಸಾಹ 36 ರನ್ ಬಾರಿಸಿದರೆ, ಉಳಿದ ಎಂಟು ಎಸೆತಗಳನ್ನು ಎದುರಿಸಿದ ಶುಭ್ ಮಾನ್ ಗಿಲ್ ಕೇವಲ ನಾಲ್ಕು ರನ್ ಬಾರಿಸಿದರು. ಆದರೆ, ಡೇನಿಯಲ್ ಸ್ಯಾಮ್ಸ್ ಎಸೆದ 8ನೇ ಓವರ್ ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸುವ ಮೂಲಕ ಶುಭ್ ಮಾನ್ ಗಿಲ್ ಗಮನಸೆಳೆದರು.
IPL 2022 ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾದ ಮುಂಬೈ ಇಂಡಿಯನ್ಸ್
12ನೇ ಓವರ್ ನಲ್ಲಿ ಶುಭ್ ಮಾನ್ ಗಿಲ್ ತಮ್ಮ 33ನೇ ಎಸೆತದಲ್ಲಿ ಅರ್ಧಶತಲಕ ಪೂರೈಸಿದರೆ, ವೃದ್ಧಿಮಾನ್ ಸಾಹ ಅರ್ಧಶತಕ ಬಾರಿಸಲು 34 ಎಸೆತಗಳನ್ನು ಆಡಿದರು. ಆ ಬಳಿಕ ಇನ್ನಷ್ಟು ಅಬ್ಬರದ ಆಟವಾಡುವ ಪ್ರಯತ್ನ ಮಾಡಿದ ಜೋಡಿ ಮುರುಗನ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿತು. ಅಶ್ವಿನ್ ಎಸೆತದಲ್ಲಿ ಗಿಲ್, ಲಾಂಗ್ ಆನ್ ನಲ್ಲಿ ವಿಕೆಟ್ ನೀಡಿದರೆ, ವೃದ್ಧಿಮಾನ್ ಸಾಹ ಡೀಪ್ ಸ್ಕ್ವೇರ್ ಲೆಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಐಪಿಎಲ್ ಇತಿಹಾಸದ 2ನೇ ಅತ್ಯಂತ ವೇಗದ ಎಸೆತ ಎಸೆದ ಉಮ್ರಾನ್ ಮಲಿಕ್!
ಆದರೆ, ಇದರಿಂದ ಮುಂಬೈ ತಂಡದ ಅದೃಷ್ಟ ಬದಲಾದಂತೆ ಕಾಣಲಿಲ್ಲ. ಸಾಯಿ ಸುದರ್ಶನ್ 11 ಎಸೆತಗಳಲ್ಲಿ 14 ರನ್ ಬಾರಿಸಿ ಹಿಟ್ ವಿಕೆಟ್ ಆದರೆ, ನಾಯಕ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿದ್ದ 24 ರನ್ ಸಿಡಿಸಿ ತಂಡದ ಮೊತ್ತ 156 ರನ್ ಆಗಿದ್ದಾಗ ವಿಕೆಟ್ ನೀಡಿದರು. ಕೊನೇ ಹಂತದಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ನಲ್ಲಿ ಇನ್ನಷ್ಟು ನಿಯಂತ್ರಣ ಸಾಧಿಸಿ ಗೆಲುವು ಕಂಡಿತು.