Asianet Suvarna News Asianet Suvarna News

IPL 2022 ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರು ಐಪಿಎಲ್‌ ಆರಂಭದಿಂದಲೇ ಲಭ್ಯ..!

* ಐಪಿಎಲ್ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪಾಳಯದಿಂದ ಗುಡ್‌ ನ್ಯೂಸ್

* 15ನೇ ಆವೃತ್ತಿಯ ಐಪಿಎಲ್‌ ಆರಂಭದಲ್ಲಿ ಆಫ್ರಿಕಾದ ಆಟಗಾರರು ಆಯ್ಕಗೆ ಲಭ್ಯ

* ಮಾರ್ಚ್‌ 26ರಿಂದ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ

 

IPL 2022 Rabada to Ngidi South Africa leave out IPL bound players from Test squad against Bangladesh kvn
Author
Bengaluru, First Published Mar 19, 2022, 12:11 PM IST | Last Updated Mar 19, 2022, 12:11 PM IST

ಜೋಹಾನ್ಸ್‌ಬರ್ಗ್‌(ಮಾ.19): ದಕ್ಷಿಣ ಆಫ್ರಿಕಾದ ತಾರಾ ಕ್ರಿಕೆಟಿಗರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಬದಲು ಐಪಿಎಲ್‌ (IPL 2022) ಟೂರ್ನಿಯನ್ನು ಆಯ್ಕೆ ಮಾಡಿಕೊಂಡಿದ್ದು, ಮಾರ್ಚ್‌ 30ರಿಂದ ಏಪ್ರಿಲ್‌ 12ರ ವರೆಗೂ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಐವರು ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹರಿಣಗಳ ತಂಡದ ವೇಗದ ಬೌಲರ್‌ಗಳಾದ ಕಗಿಸೋ ರಬಾಡ (Kagiso Rabada), ಲುಂಗಿ ಎನ್‌ಗಿಡಿ, ಮಾರ್ಕೊ ಯಾನ್ಸನ್‌, ಏಡನ್‌ ಮಾರ್ಕ್ರಮ್‌ ಹಾಗೂ ರಾಸಿ ವಾನ್‌ ಡೆರ್‌ ಡುಸ್ಸೆನ್‌, ಟೆಸ್ಟ್‌ ಸರಣಿಯ ಬದಲು ಐಪಿಎಲ್‌ನಲ್ಲಿ ಆಡಲು ಇಚ್ಛಿಸಿದ್ದಾರೆ. ವೇಗಿ ಏನ್ರಿಚ್‌ ನೋಕಿಯ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾದರೆ ಅವರು ಕೂಡ ಐಪಿಎಲ್‌ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಈ ಆಟಗಾರರು ಸದ್ಯದಲ್ಲೇ ಮುಂಬೈಗೆ ಆಗಮಿಸಿ ತಮ್ಮ ತಮ್ಮ ಐಪಿಎಲ್‌ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ.

ತವರಿನಲ್ಲಿ ಭಾರತ ವಿರುದ್ದ ಮಾರ್ಕೊ ಯಾನ್ಸೆನ್ (Marco Jansen) ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಯಾನ್ಸೆನ್‌ರನ್ನು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಮಾರಕ ವೇಗಿ ಕಗಿಸೋ ರಬಾಡ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಲುಂಗಿ ಎಂಗಿಡಿ, ಡೆಲ್ಲಿ ಕ್ಯಾಪಿಟಲ್ಸ್‌ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಈ ಮೊದಲು ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಡೀನ್‌ ಎಲ್ಗಾರ್,  ‘ಆಟಗಾರರಿಗೆ ಐಪಿಎಲ್‌ ಮತ್ತು ರಾಷ್ಟ್ರ ತಂಡದ ಆಯ್ಕೆಯನ್ನು ನೀಡುವುದು ಕಷ್ಟ ಎಂಬುದು ಗೊತ್ತಿದೆ. ಆದರೆ ಇದರಲ್ಲಿ ಅವರ ಬದ್ಧತೆ ಗೊತ್ತಾಗಲಿದೆ’ ಎಂದಿದ್ದರು. 

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್‌ 26ರಿಂದ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿಯ ಐಪಿಎಲ್‌ನಲ್ಲಿ ನೂತನವಾಗಿ ಸೇರ್ಪಡೆಯಾಗಿರುವ ಎರಡು ತಂಡಗಳ ಜತೆಗೆ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಗ್ರೂಪ್‌ ಹಂತದ 70 ಪಂದ್ಯಗಳಿಗೆ ಮಹಾರಾಷ್ಟ್ರದ 4 ಸ್ಟೇಡಿಯಂಗಳು ಆತಿಥ್ಯವನ್ನು ವಹಿಸಲಿವೆ.

IPL 2022: ಆರಂಭಿಕ ಕೆಲ ಪಂದ್ಯಗಳಿಗೆ ದಕ್ಷಿಣ ಆಟಗಾರರು ಅಲಭ್ಯ..?

ಗಾಯಾಳು ಮಾರ್ಕ್ ವುಡ್‌ ಐಪಿಎಲ್‌ನಿಂದ ಹೊರಕ್ಕೆ

ನವದೆಹಲಿ: ಇಂಗ್ಲೆಂಡ್‌ ವೇಗಿ ಮಾರ್ಕ್ ವುಡ್‌ (Mark Wood) ಮುಂಬರುವ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವೆಸ್ಟ್‌ಇಂಡೀಸ್‌ ವಿರುದ್ಧ ಕಳೆದ ವಾರ ನಡೆದ ಮೊದಲ ಟೆಸ್ಟ್‌ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದಾಗಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ತಿಳಿಸಿದೆ. ಕಳೆದ ತಿಂಗಳು ನಡೆದಿದ್ದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 7.5 ಕೋಟಿ ರು. ನೀಡಿ ಮಾರ್ಕ್‌ ವುಡ್‌ರನ್ನು ಲಖನೌ ಸೂಪರ್‌ ಜೈಂಟ್ಸ್‌ ತಂಡ ಖರೀದಿಸಿತ್ತು. ಸದ್ಯದಲ್ಲೇ ಬದಲಿ ಆಟಗಾರನನ್ನು ಲಖನೌ ತಂಡ ಆಯ್ಕೆ ಮಾಡಿಕೊಳ್ಳಲಿದೆ.

ಐಪಿಎಲ್‌ಗೆ ಹೆಚ್ಚಿನ ಭದ್ರತೆ ನೀಡಲು ಬಿಸಿಸಿಐ ಮನವಿ

ಮುಂಬೈ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ (BCCI), ಐಪಿಎಲ್‌ಗೆ ಹೆಚ್ಚಿನ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ. ಕಳೆದ ವಾರ ಬೆಂಗಳೂರಿನಲ್ಲಿ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಕೆಲ ಅಭಿಮಾನಿಗಳು ವಿರಾಟ್‌ ಕೊಹ್ಲಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದರು. ಆಟಗಾರರು ಕೋವಿಡ್‌ ಬಯೋಬಬಲ್‌ನಲ್ಲಿದ್ದು, ಇಂತಹ ಘಟನೆಗಳಿಂದ ಆಟಗಾರರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಂತಹ ಘಟನೆಗಳು ಮರುಕಳಿಸದಿರಲು ಕ್ರೀಡಾಂಗಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಬಿಸಿಸಿಐ ಮನವಿ ಮಾಡಲಿದೆ.

Latest Videos
Follow Us:
Download App:
  • android
  • ios