* 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ* ಪರ್ಪಲ್ ಕ್ಯಾಪ್ ಜಯಿಸಿದ್ದ ಮೋಹಿತ್ ಶರ್ಮಾ ಈಗ ಗುಜರಾತ್ ತಂಡದ ನೆಟ್ ಬೌಲರ್ ಆಗಿ ನೇಮಕ* 2014ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದ ಮೋಹಿತ್ ಶರ್ಮಾ
ಮುಂಬೈ(ಮಾ.22): ಕ್ರಿಕೆಟ್ ವೃತ್ತಿಬದುಕಿನಲ್ಲಿ ಏಳು-ಬೀಳು ಸಹಜ. ಆದರೆ ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿ, ಭಾರತ ತಂಡವನ್ನು ವಿಶ್ವಕಪ್‌ಗಳಲ್ಲಿ ಪ್ರತಿನಿಧಿಸಿದ ಹೊರತಾಗಿಯೂ ವೇಗಿ ಮೋಹಿತ್ ಶರ್ಮಾ ಈ ವರ್ಷ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್ ಬೌಲರ್ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ಈ ವಿಷಯ ಕೇಳಿ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕ್ಕೊಳಗಾಗಿದ್ದು, ಸಾಮಾಜಿಕ ತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ನ ಮುಂಚೂಣಿ ಬೌಲರ್ ಆಗಿದ್ದ ಮೋಹಿತ್, 2014ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿ ಆ ಆವೃತ್ತಿಯ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡು ಪರ್ಪಲ್ ಕ್ಯಾಪ್ ಪಡೆದಿದ್ದರು. ಹರ್ಯಾಣ ಮೂಲದ ಮೋಹಿತ್ 2014ರ ಟಿ20 ಹಾಗೂ 2015ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಚೆನ್ನೈ 2016ರಲ್ಲಿ ಐಪಿಎಲ್‌ನಿಂದ ನಿಷೇಧಕ್ಕೊಳಗಾದ ಬಳಿಕ ಮೋಹಿತ್ ವೃತ್ತಿ ಜೀವನ ತಿರುವು ಪಡೆಯಿತು.
2016-18ರಲ್ಲಿ ಪಂಜಾಬ್ ಪರ ಆಡಿದ ಅವರು ಮತ್ತೆ 2019ರಲ್ಲಿ ಚೆನ್ನೈಗೆ ವಾಪಸಾದರೂ ಹಿಂದಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 2020ರಲ್ಲಿ ಡೆಲ್ಲಿ ತಂಡಕ್ಕೆ ಸೇರಿದ್ದ ಅವರು ಕೇವಲ 1 ಪಂದ್ಯ ಆಡಿದ್ದರು. ಐಪಿಎಲ್‌ನಲ್ಲಿ ಒಟ್ಟು 86 ಪಂದ್ಯಗಳಲ್ಲಿ 92 ವಿಕೆಟ್ ಪಡೆದಿರುವ ಅವರು, 2022ರ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗದೆ ಉಳಿದಿದ್ದರು. ಬಳಿಕ ಗುಜರಾತ್ ತಂಡ ಅವರನ್ನು ನೆಟ್ ಬೌಲರ್ ಆಗಿ ನೇಮಿಸಿಕೊಂಡಿದೆ.
ಐಪಿಎಲ್: ಆರ್‌ಸಿಬಿ ತಂಡ ಸೇರಿಕೊಂಡ ಕೊಹ್ಲಿ
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸೋಮವಾರ ತಂಡ ಸೇರಿಕೊಂಡರು. ವಿರಾಟ್ ಇನ್ನೂ ತಂಡ ಕೂಡಿಕೊಂಡಿಲ್ಲ ಎನ್ನುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಅವರು ತಂಡ ಉಳಿದುಕೊಂಡಿರುವ ಹೋಟೆಲ್‌ಗೆ ಆಗಮಿಸುತ್ತಿರುವ ಫೋಟೋವನ್ನು ಆರ್‌ಸಿಬಿ ತನ್ನ ಟ್ವೀಟರ್ ಖಾತೆ ಮೂಲಕ ಪ್ರಕಟಿಸಿದ್ದು ‘ಕಿಂಗ್ ಕೊಹ್ಲಿ ಆಗಮಿಸಿದ್ದಾರೆ’ ಎಂದು ಶೀರ್ಷಿಕೆ ಬರೆದಿದೆ. ವಿರಾಟ್ 3 ದಿನಗಳ ಕ್ವಾರಂಟೈನ್ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.
ಋುತುರಾಜ್ ಫಿಟ್: ಚೆನ್ನೈ ತಂಡ ನಿರಾಳ
ಮುಂಬೈ: ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಋುತುರಾಜ್ ಗಾಯಕ್ವಾಡ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಮೊದಲ ಪಂದ್ಯದಿಂದಲೇ ತಂಡಕ್ಕೆ ಲಭ್ಯವಿರಲಿದ್ದಾರೆ ಎಂದು ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಮೊಣಕೈ ಗಾಯಕ್ಕೆ ತುತ್ತಾಗಿದ್ದ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ತಂಡವನ್ನು ಕೂಡಿಕೊಂಡು ಅಭ್ಯಾಸವನ್ನೂ ಆರಂಭಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗಾಯಕ್ವಾಡ್ ಫಿಟ್ ಆಗಿರುವುದರಿಂದ ಚೆನ್ನೈ ತಂಡದ ಆತಂಕವನ್ನು ದೂರವಾಗಿದೆ. ಆದರೆ ಆಲ್ರೌಂಡರ್ ದೀಪಕ್ ಚಹರ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಆರಂಭದ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು, 5 ತಿಂಗಳು ಕ್ರಿಕೆಟ್‌ನಿಂದ ದೂರವಿದ್ದ ದಕ್ಷಿಣ ಆಫ್ರಿಕಾದ ಏನ್ರಿಚ್ ನೋಕಿಯ ಮುಂಬೈಗೆ ಆಗಮಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಂಡಿದ್ದಾರೆ.
