IPL 2022: ಮಯಾಂಕ್ ಅಗರ್‌ವಾಲ್ ನಾಯಕತ್ವದಡಿ ಆಡಲು ರೆಡಿ ಎಂದ ಶಿಖರ್ ಧವನ್..!
* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ
* ಮಯಾಂಕ್ ಅಗರ್‌ವಾಲ್ ನಾಯಕತ್ವದಡಿ ಆರಂಭಿಕನಾಗಿ ಕಣಕ್ಕಿಳಿಯಲು ರೆಡಿ ಎಂದ ಧವನ್
* ಪಂಜಾಬ್‌ಗೆ ಮೊದಲ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿ ತಂಡ ಸವಾಲು
ಬೆಂಗಳೂರು(ಮಾ.17): ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ (Shikhar Dhawan), ಪಂಜಾಬ್ ಕಿಂಗ್ಸ್ (Punjab Kings) ತಂಡದ ಪರ ಕಣಕ್ಕಿಳಿಯಲಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಇದೀಗ ಯುವ ಹಾಗೂ ಸ್ಪೋಟಕ ಆರಂಭಿಕ ಬ್ಯಾಟರ್ ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ನಾಯಕತ್ವದಡಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಈ ಹಿಂದೆ ಕೆ.ಎಲ್. ರಾಹುಲ್ (KL Rahul) ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಕೆ.ಎಲ್. ರಾಹುಲ್, ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದು ಲಖನೌ ಸೂಪರ್ ಜೈಂಟ್ಸ್ (Lucknow Supergiants) ತಂಡವನ್ನು ಕೂಡಿಕೊಂಡಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್ ಅವರಿಗೆ ಪಂಜಾಬ್ ತಂಡದ ನಾಯಕತ್ವ ಪಟ್ಟ ಕಟ್ಟಿದೆ. ಮಯಾಂಕ್ ಅಗರ್‌ವಾಲ್ ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ನಾಯಕನಾಗಿ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.
ಇದೀಗ ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ತಮ್ಮ ತಂಡದ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡಿದ್ದಾರೆ. ANI ಜತೆ ಮಾತನಾಡಿರುವ ಡೆಲ್ಲಿ ಮೂಲದ ಧವನ್, ನಾನು ಮುಂಬರುವ ಐಪಿಎಲ್ ಟೂರ್ನಿಯನ್ನು ಸಕಾರಾತ್ಮಕವಾಗಿ ಎದುರು ನೋಡುತ್ತಿದ್ದೇನೆ. ಮಯಾಂಕ್ ಅಗರ್‌ವಾಲ್ ನಾಯಕತ್ವದಡಿ ಆಡುತ್ತಿರುವುದು ನನ್ನ ಪಾಲಿಗಂತೂ ಖುಷಿಯ ವಿಚಾರ. ನಮ್ಮದು ಬಲಿಷ್ಠ ತಂಡವಾಗಿದೆ. ಎಲ್ಲಾ ಯುವ ಆಟಗಾರರು ಸಾಕಷ್ಟು ಒಳ್ಳೆಯ ಹಾಗೂ ಪ್ರತಿಭಾನ್ವಿತರಾಗಿದ್ದಾರೆ. ಈ ವರ್ಷ ನಾವು ದೊಡ್ಡ ಸಾಧನೆಯನ್ನು ಮಾಡುವ ವಿಶ್ವಾಸವಿದೆ. ಇದರ ಜತೆಗೆ ಮಯಾಂಕ್ ಅಗರ್‌ವಾಲ್ ಜತೆಗೆ ಆರಂಭಿಕನಾಗಿ ಕಣಕ್ಕಿಳಿಯಲು ಅವಕಾಶ ಸಿಕ್ಕಿದರೆ, ನಾನಂತೂ ರೆಡಿಯಾಗಿದ್ದೇನೆ. ಯಾಕೆಂದರೆ ಆರಂಭಿಕ ಬ್ಯಾಟರ್‌ಗಳು ಸಾಕಷ್ಟು ಜವಾಬ್ದಾರಿಯುತ ಪ್ರದರ್ಶನ ತೋರಬೇಕು. ನಾನು ಇಂತಹ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.
IPL 2022: ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟರ್ ಪೃಥ್ವಿ ಶಾ Yo-Yo Test ಫೇಲ್.!
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 8.25 ಕೋಟಿ ರುಪಾಯಿ ನೀಡಿ ಶಿಖರ್ ಧವನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಶಿಖರ್ ಧವನ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿರಲಿಲ್ಲ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 16 ಪಂದ್ಯಗಳನ್ನಾಡಿ 587 ರನ್ ಬಾರಿಸಿದ್ದರು. ಇದೀಗ ಧವನ್, ಪಂಜಾಬ್ ಕಿಂಗ್ಸ್ ತಂಡದ ಪರವೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಪಂಜಾಬ್ ಕಿಂಗ್ಸ್ ಪಾಲ್ಗೊಳ್ಳುತ್ತಾ ಬಂದಿದೆಯಾದರೂ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂತೆ ಇದುವರೆಗೂ ಕಪ್ ಗೆಲ್ಲಲು ಯಶಸ್ವಿಯಾಗಿಲ್ಲ. ಇದೀಗ ಮಯಾಂಕ್ ಅಗರ್‌ವಾಲ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಪಂಜಾಬ್ ಕಿಂಗ್ಸ್ ತಂಡವು ಮಾರ್ಚ್ 27ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.