ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ನಲ್ಲಿ ಅದ್ಭುತ ದಾಖಲೆ ಹೊಂದಿರುವ ಶಿಖರ್ ಧವನ್ ಅವರ ಮತ್ತೊಂದು ಸೂಪರ್ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಗಿದೆ.

ಮುಂಬೈ (ಏ.25): ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಗ್ಗುಲ ಮುಳ್ಳಾಗಿ ಕಾಡುವ ಶಿಖರ್ ಧವನ್ (Shikhar Dhawan) ಅವರ ಮತ್ತೊಂದು ಬ್ಯಾಟಿಂಗ್ ಪ್ರಹಾರಕ್ಕೆ ರವೀಂದ್ರ ಜಡೇಜಾ ಟೀಮ್ ಬೆಂಡಾಗಿದೆ. ಶಿಖರ್ ಧವನ್ ಐಪಿಎಲ್ ನಲ್ಲಿ ಬಾರಿಸಿದ ತಮ್ಮ 46ನೇ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ ಸವಾಲಿನ ಗುರಿ ನಿಗದಿ ಮಾಡಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಮೊದಲ 10 ಓವರ್ ಗಳಲ್ಲಿ ನೀರಸ ಆಟವಾಡಿತ್ತು. ಆ ಬಳಿಕ ಶಿಖರ್ ಧವನ್ (88 ರನ್, 59 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಸಾಹಸಿಕ ಬ್ಯಾಟಿಂಗ್ ನ ಫಲವಾಗಿ 4 ವಿಕೆಟ್ 187 ರನ್ ಪೇರಿಸಲು ಯಶಸ್ವಿಯಾಯಿತು.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡ ರನ್ ಗಳಿಸಲು ಪರದಾಟ ನಡೆಸಿತು. ಈವರೆಗೂ ಐಪಿಎಲ್ ನಲ್ಲಿ ಪವರ್ ಪ್ಲೇ ಅವಧಿಯಲ್ಲಿ ಗರಿಷ್ಠ ರನ್ ಬಾರಿಸಿರುವ 2ನೇ ತಂಡವಾಗಿ ಈ ಪಂದ್ಯಕ್ಕೆ ಬಂದಿದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲ ಆರು ಓವರ್ ಗಳಲ್ಲಿ ಕೇವಲ 37 ರನ್ ಬಾರಿಸಿತ್ತು. ಪವರ್ ಪ್ಲೇ ಅವಧಿಯ 6 ಓವರ್ ಗಳ ಪೈಕಿ 4 ಓವರ್ ಗಳನ್ನು ಸ್ಪಿನ್ ಬೌಲರ್ ಮೂಲಕವೇ ಮಾಡಿಸಿತ್ತು. 21 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 18 ರನ್ ಬಾರಿಸಿದ್ದ ಮಯಾಂಕ್ ಅಗರ್ವಾಲ್, 6ನೇ ಓವರ್ ನಲ್ಲಿ ತೀಕ್ಷಣಗೆ ವಿಕೆಟ್ ನೀಡಿದರು.

ಮಯಾಂಕ್ ಅಗರ್ವಾಲ್ ಔಟಾದ ಬಳಿಕ ಅಚ್ಚರಿ ಎನ್ನುವಂತೆ ಜಾನಿ ಬೇರ್ ಸ್ಟೋ, ಲಿಯಾಮ್ ಲಿವಿಂಗ್ ಸ್ಟೋನ್ ಬದಲಿಗೆ ಭಾನುಕಾ ರಾಜಪಕ್ಷೆ ಅವರನ್ನು 3ನೇ ಕ್ರಮಾಂಕದಲ್ಲಿ ಬಡ್ತಿ ನೀಡಿ ಪಂಜಾಬ್ ಕಣಕ್ಕಿಳಿಸಿದ್ದು ಲಾಭ ಮಾಡಿಕೊಟ್ಟಿತು. ಎರಡಂಕಿ ಮೊತ್ತ ಮುಟ್ಟುವ ಮೊದಲೇ ಭಾನುಕಾ ರಾಜಪಕ್ಷೆ ಅವರ ಕ್ಯಾಚ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಕೈಚೆಲ್ಲುವ ಮೂಲಕ ಜೀವದಾನ ನೀಡಿತು. ಒಮ್ಮೆ ರುತುರಾಜ್ ಗಾಯಕ್ವಾಡ್ ಕ್ಯಾಚ್ ಕೈಚೆಲ್ಲಿದರೆ, ಇನ್ನೊಮ್ಮೆ ಮಿಚೆಲ್ ಸ್ಯಾಂಟ್ನರ್ ಕ್ಯಾಚ್ ಬಿಟ್ಟರು. ಎರಡೂ ಬಾರಿ ರವೀಂದ್ರ ಜಡೇಜಾ ಅವರೇ ಬೌಲರ್ ಆಗಿದ್ದರು. ಶಿಖರ್ ಧವನ್ ಹಾಗೂ ರಾಜಪಕ್ಷೆ ತಂಡದ ಇನ್ನಿಂಗ್ಸ್ ಗೆ ಆಧಾರವಾಗಿದ್ದರಿಂದ ಮೊದಲ 10 ಓವರ್ ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 1 ವಿಕೆಟ್ ಗೆ 72 ರನ್ ಬಾರಿಸಿತ್ತು. ಇದರಲ್ಲಿ 2 ಸಿಕ್ಸರ್ ಗಳು ಹಾಗೂ 4 ಬೌಂಡರಿ ಸೇರಿದ್ದವು.

ಆ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಶಿಖರ್ ಧವನ್ ಬಿರುಸಾಗಿ ರನ್ ಬಾರಿಸಲು ಆರಂಭಿಸಿದರು. ಮುಖೇಶ್ ಚೌಧರಿ ಎಸೆದ 13ನೇ ಓವರ್ ನಲ್ಲಿ ಶಿಖರ್‌ ಧವನ್ ಮೂರು ಬೌಂಡರಿಗಳನ್ನು ಸಿಡಿಸುವ ಮೂಲಕ ಈ ಓವರ್ ನಲ್ಲಿ 16 ರನ್ ದೋಚಿತು. 

ಚೆನ್ನೈ ವಿರುದ್ಧ ಬ್ಯಾಟಿಂಗ್ ಮಾಡುವುದನ್ನು ಆನಂದಿಸುವ ಶಿಖರ್ ಧವನ್ ಕೇವಲ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಡ್ವೈನ್ ಪ್ರಿಟೋರಿಯಸ್ ಎಸೆತದಲ್ಲಿ ಸ್ವೀಪ್ ಮಾಡಿ ಬೌಂಡರಿ ಸಿಡಿಸಿ ಚೆನ್ನೈ ವಿರುದ್ಧ ತಮ್ಮ 9ನೇ ಅರ್ಧಶತಕ ಪೂರೈಸಿದರು. 2ನೇ ವಿಕೆಟ್ ಗೆ ಈ ಜೋಡಿ 71 ಎಸೆತಗಳಲ್ಲಿ 110 ರನ್ ಜೊತೆಯಾಟವಾಡುವ ಮೂಲಕ ಸವಾಲಿನ ಮೊತ್ತಕ್ಕೆ ಉತ್ತಮ ವೇದಿಕೆ ನಿರ್ಮಿಸಿತ್ತು. 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದ ಭಾನುಕಾ 18ನೇ ಓವರ್ ನಲ್ಲಿ ನಿರ್ಗಮನ ಕಂಡರು.

ಶಿಖರ್ ಧವನ್ 6 ಸಾವಿರ ರನ್ ದಾಖಲೆ: ಮಹೇಶ್ ತೀಕ್ಷಣ ಎಸೆತದಲ್ಲಿ ಚೆಂಡನ್ನು ಕವರ್ಸ್ ನತ್ತ ತಳ್ಳಿ ಒಂದು ರನ್ ಕದಿಯುವ ಮೂಲಕ ಶಿಖರ್ ಧವನ್, ಐಪಿಎಲ್ ನಲ್ಲಿ 6 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ ಪೂರೈಸಿದ ಕೇವಲ 2ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. 215 ಪಂದ್ಯಗಳಲ್ಲಿ 6402 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, 6050 ರನ್ ಬಾರಿಸಿರುವ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ.34.97ರ ಸರಾಸರಿಯಲ್ಲಿ ಇಷ್ಟು ರನ್ ಗಳನ್ನು ಶಿಖರ್ ಧವನ್ ಬಾರಿಸಿದ್ದಾರೆ. ಅದರಲ್ಲೂ 1 ಸಾವಿರಕ್ಕಿಂತ ಅಧಿಕ ರನ್ ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೇ ಬಾರಿಸಿದ್ದಾರೆ.