ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ವಿಶ್ವಾಸದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಿಷಿ ಧವನ್ ಅಂದಾಜು ಆರು ವರ್ಷ ಬಳಿಕ ಐಪಿಎಲ್ ಪಂದ್ಯ ಆಡಲಿದ್ದಾರೆ. 2016ರ ಮೇ 21ರನ್ನು ಕೊನೆಯ ಬಾರಿಗೆ ಅವರು ಐಪಿಎಲ್ ಪಂದ್ಯ ಆಡಿದ್ದರು,
ಮುಂಬೈ (ಏ.25): ಈವರೆಗೂ ಆಡಿರುವ ಏಳು ಪಂದ್ಯಗಳ ಪೈಕಿ 5ರಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಷ್ಟೇ ಪಂದ್ಯಗಳಿಂದ ನಾಲ್ಕು ಸೋಲು ಕಂಡಿರುವ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಹಾಲಿ ಐಪಿಎಲ್ ನಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು 2ನೇ ಬಾರಿ. ಮೊದಲ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು ಕಂಡಿತ್ತು. ಪಂಜಾಬ್ ಕಿಂಗ್ಸ್ ತಂಡ ಪಂದ್ಯಕ್ಕಾಗಿ ಮೂರು ಬದಲಾವಣೆಗಳನ್ನು ಮಾಡಿದೆ. ಶಾರುಖ್ ಖಾನ್, ನಥಾನ್ ಎಲ್ಲೀಸ್ ಹಾಗೂ ವೈಭವ್ ಅರೋರಾ ತಂಡದಿಂದ ಹೊರಬಿದ್ದಿದ್ದರೆ ಅವರ ಸ್ಥಾನಕ್ಕೆ ಭಾನುಕಾ ರಾಜಪಕ್ಸೆ, ರಿಷಿ ಧವನ್ ಹಾಗೂ ಸಂದೀಪ್ ಶರ್ಮ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಭಾನುಕಾ ರಾಜಪಕ್ಸೆ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಷ್‌ದೀಪ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ(ನಾಯಕ), ಎಂಎಸ್ ಧೋನಿ(ವಿ.ಕೀ), ಮಿಚೆಲ್ ಸ್ಯಾಂಟ್ನರ್, ಡ್ವೈನ್ ಪ್ರಿಟೋರಿಯಸ್, ಡ್ವೇನ್ ಬ್ರಾವೊ, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ
ಏನನ್ನು ನಿರೀಕ್ಷೆ ಮಾಡಬಹುದು: ವಾಂಖೆಡೆ ಮೈದಾನ ದೊಡ್ಡ ಮೊತ್ತಗಳಿಗೆ ಹೆಸರುವಾಸಿ, ಅದರಂತೆ ಈ ಮೈದಾನದ ಟ್ರೆಂಡ್ ಚೇಸಿಂಗ್ ಮಾಡುವುದು. ಆದರೆ, ಈ ಮೈದಾನದಲ್ಲಿ ಆಡಿದ ಕಳೆದ ಎರಡು ಪಂದ್ಯಗಳಲ್ಲೂ ದೊಡ್ಡ ಮೊತ್ತವನ್ನು ರಕ್ಷಣೆ ಮಾಡುಕೊಳ್ಳುವಲ್ಲಿ ತಂಡ ಯಶಶ್ವಿಯಾಗಿತ್ತು. ಎರಡೂ ಬಾರಿಯೂ ಸೋಲು ಕಂಡ ತಂಡ ಡೆಲ್ಲಿ ಕ್ಯಾಪಿಟಲ್ಸ್ ಆಗಿತ್ತು.
ನಿಮಗಿದು ಗೊತ್ತೇ?
* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೆಎಲ್ ರಾಹುಲ್ ಅವರ ಎಕಾನಮಿ 5.8 ಆಗಿದೆ. ಇದು ಐಪಿಎಲ್ ನಲ್ಲಿ ಯಾವುದೇ ಎದುರಾಳಿಯ ವಿರುದ್ಧ ಬೌಲರ್ ವೊಬ್ಬನ ಅತ್ಯುತ್ತಮ ಎಕಾನಮಿ ಎನಿಸಿದೆ. ಅದಲ್ಲದೆ, ರಾಹುಲ್ ಚಹರ್ ಅವರ 50ನೇ ಪಂದ್ಯ ಇದಾಗಿದೆ.
* ಹಾಲಿ ಐಪಿಎಲ್ ನಲ್ಲಿ ರುತುರಾಜ್ ಗಾಯಕ್ವಾಡ್ ಅವರ ಸರಾಸರಿ 15.4 ಆಗಿದೆ. ಹಾಲಿ ಟೂರ್ನಿಯಲ್ಲಿ ಕನಿಷ್ಠ 100 ರನ್ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕನಿಷ್ಠ ಸರಾಸರಿ ಹೊಂದಿರುವ ಬ್ಯಾಟ್ಸ್ ಮನ್ ಇವರಾಗಿದ್ದಾರೆ.
* ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಇನ್ನು 9 ರನ್ ಬಾರಿಸಿದರೆ, ಐಪಿಎಲ್ ನಲ್ಲಿ 1 ಸಾವಿರ ರನ್ ಬಾರಿಸಿದ ದಾಖಲೆ ಮಾಡಲಿದ್ದಾರೆ.
* ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಗಳು ಹಾಲಿ ವರ್ಷದ ಐಪಿಎಲ್ ನಲ್ಲಿ ಕೇವಲ 18 ವಿಕೆಟ್ ಉರುಳಿಸಿದ್ದಾರೆ. 10 ತಂಡಗಳ ಪೈಕಿ ವೇಗದ ಬೌಲರ್ ಗಳು ಉರುಳಿಸಿದ ಕನಿಷ್ಠ ವಿಕೆಟ್ಸ್ ಇದಾಗಿದೆ.
