* ಸತತ 4 ಸೋಲು ಕಂಡು ಕಂಗಾಲಾಗಿರುವ ಮುಂಬೈ ಇಂಡಿಯನ್ಸ್‌* ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈಗೆ ಪಂಜಾಬ್ ಕಿಂಗ್ಸ್ ಸವಾಲು* ಈ ಪಂದ್ಯವನ್ನೂ ಸೋತರೆ ಮುಂಬೈ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮ

ಪುಣೆ(ಏ.13): ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (5 time IPL champion Mumbai Indians) 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಹೆಣಗಾಡುತ್ತಿದ್ದು, ಬುಧವಾರ ಪಂಜಾಬ್‌ ಕಿಂಗ್ಸ್‌ (Punjab Kings) ಸವಾಲನ್ನು ಎದುರಿಸಲಿದೆ. ರೋಹಿತ್‌ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್‌ ಈವರೆಗೆ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಪರಾಭವಗೊಂಡಿದ್ದು, ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಆಡಿರುವ 4 ಪಂದ್ಯಗಲ್ಲಿ 2 ರಲ್ಲಿ ಗೆಲುವು ಸಾಧಿಸಿದೆ.

ಕೋಲ್ಕತಾ ವಿರುದ್ಧ ಆಘಾತಕಾರಿ ಸೋಲುಂಡ ಬಳಿಕ ಕಳೆದ ಪಂದ್ಯದಲ್ಲಿ ಮುಂಬೈ ಕೇವಲ 2 ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದು ಕೈ ಸುಟ್ಟುಕೊಂಡಿತ್ತು. ಈ ಪಂದ್ಯದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಶಾನ್‌ ಕಿಶನ್‌ (Ishan Kishan), ಸೂರ್ಯಕುಮಾರ್ ಯಾದವ್‌ (Suryakumar Yadav), ತಿಲಕ್‌ ವರ್ಮಾ (Tilak Verma) ಮಿಂಚುತ್ತಿದ್ದರೂ, ಉಳಿದವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ನಾಯಕ ರೋಹಿತ್ ಶರ್ಮಾ‌, ಕೀರನ್ ಪೊಲ್ಲಾರ್ಡ್‌ ಜವಾಬ್ದಾರಿ ಅರಿತು ಆಡಬೇಕಿದೆ. ತಂಡದ ಬೌಲಿಂಗ್‌ ಪಡೆ ಮೊದಲಿಗಿಂತ ದುರ್ಬಲವಾಗಿ ತೋರುತ್ತಿದ್ದು, ಜಸ್‌ಪ್ರೀತ್‌ ಬುಮ್ರಾ (Jasprit Bumrah) ದುಬಾರಿಯಾಗುತ್ತಿದ್ದಾರೆ. ಟೈಮಲ್ ಮಿಲ್ಸ್‌, ಮುರುಗನ್ ಅಶ್ವಿನ್‌ (Murugan Ashwin), ಬಸಿಲ್‌ ಥಂಪಿ, ಜಯದೇವ್ ಉನಾದ್ಕಟ್‌ ಸುಧಾರಿತ ಪ್ರದರ್ಶನ ನೀಡಬೇಕಿದೆ.

ಇನ್ನೊಂದೆಡೆ, ಕಳೆದ ಪಂದ್ಯದಲ್ಲಿ ಸೋತಿದ್ದ ಪಂಜಾಬ್‌ ಪುಟಿದೇಳುವ ತವಕದಲ್ಲಿದೆ. ನಾಯಕ ಮಯಾಂಕ್‌ ಅಗರ್‌ವಾಲ್ (Mayank Agarwal) ಬ್ಯಾಟಿಂಗ್‌ ಲಯ ಕಂಡುಕೊಳ್ಳುವ ಒತ್ತಡದಲ್ಲಿದ್ದು, ಲಿಯಾಮ್‌ ಲಿವಿಂಗ್‌ಸ್ಟೋನ್‌ ಮತ್ತೊಮ್ಮೆ ಅಬ್ಬರಿಸುವ ಕಾತರದಲ್ಲಿದ್ದಾರೆ. ಕಗಿಸೊ ರಬಾಡ (Kagiso Rabada) ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಇತರರಿಂದ ಸೂಕ್ತ ಬೆಂಬಲ ಸಿಕ್ಕರೆ ಮಾತ್ರ ಗೆಲುವು ಸುಲಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಯಾವುದೇ ಕ್ಷಣದಲ್ಲಿ ಬೇಕಾದರೂ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಪಂಜಾಬ್ ತಂಡವು ಮೊದಲು ಬ್ಯಾಟ್ ಮಾಡಿದರೆ ಬೃಹತ್ ಮೊತ್ತ ಕಲೆಹಾಕಲೇ ಬೇಕು. ಅನುಭವಿ ಬ್ಯಾಟರ್ ಶಿಖರ್ ಧವನ್ (Shikhar Dhawan) ಹಾಗೂ ಮಯಾಂಕ್‌ ಅಗರ್‌ವಾಲ್ ಉತ್ತಮ ಆರಂಭ ಒದಗಿಸಿಕೊಟ್ಟರೆ, ಮಧ್ಯಮ ಕ್ರಮಾಂಕ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.

IPL 2022 Play-Offs: ಅಹಮದಾಬಾದ್‌, ಕೋಲ್ಕತಾ ಆತಿಥ್ಯ?

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಡೆವಾಲ್ಡ್ ಬ್ರೆವಿಸ್‌, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ‌, ಕೀರನ್ ಪೊಲ್ಲಾರ್ಡ್‌, ಡೇನಿಯಲ್ ಸ್ಯಾಮ್ಸ್‌, ಟೈಮಲ್ ಮಿಲ್ಸ್‌, ಮುರುಗನ್ ಅಶ್ವಿನ್‌, ಜಯದೇವ್ ಉನಾದ್ಕತ್‌, ಜಸ್ಪ್ರೀತ್ ಬುಮ್ರಾ.

ಪಂಜಾಬ್‌: ಶಿಖರ್ ಧವನ್‌, ಮಯಾಂಕ್ ಅಗರ್‌ವಾಲ್‌ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಜಾನಿ ಬೇರ್‌ಸ್ಟೋವ್‌, ಜಿತೇಶ್‌ ಶರ್ಮಾ, ಶಾರುಖ್ ಖಾನ್‌, ಓಡೆನ್ ಸ್ಮಿತ್‌, ಹಪ್ರೀರ್ತ್‌ ಬ್ರಾರ್‌, ವೈಭವ್ ಅರೋರಾ‌, ರಾಹುಲ್ ಚಹರ್‌, ಅಶ್‌ರ್‍ದೀಪ್‌ ಸಿಂಗ್.

ಸ್ಥಳ: ಪುಣೆ, ಎಂಸಿಎ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌