* 5 ಬಾರಿಯ ಚಾಂಪಿಯನ್‌ ಮುಂಬೈಗಿಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು* ಮುಂಬೈ ಗೆಲುವನ್ನು ಎದುರು ನೋಡುತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದರಷ್ಟೇ ಪ್ಲೇ ಆಫ್‌ ಸ್ಥಾನ ಖಚಿತ

ಮುಂಬೈ(ಮೇ.21): ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಪ್ಲೇ-ಆಫ್‌ ಭವಿಷ್ಯ ನಿರ್ಧರಿಸುವ, 15ನೇ ಆವೃತ್ತಿ ಐಪಿಎಲ್‌ನ ಅತಿ ರೋಚಕ ಪಂದ್ಯಕ್ಕೆ ಶನಿವಾರ ಮುಂಬೈನ ವಾಂಖೇಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals take on Mumbai Indians) ಮುಂಬೈ ಇಂಡಿಯನ್ಸ್‌ ಸವಾಲು ಎದುರಾಗಲಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅತ್ತ ಆರ್‌ಸಿಬಿ (RCB) ಆಟಗಾರರು, ಅಭಿಮಾನಿಗಳು ಮುಂಬೈ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಈ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್‌ ಜೊತೆಗೆ ಆರ್‌ಸಿಬಿಗೂ ನಿರ್ಣಾಯಕ. ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಅತ್ತ ಆರ್‌ಸಿಬಿ ಎಲ್ಲಾ 14 ಪಂದ್ಯಗಳನ್ನು ಆಡಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದ್ದು, 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಗೆದ್ದರೆ ತಂಡಕ್ಕೆ 16 ಅಂಕವಾಗಲಿದ್ದು, ನೆಟ್‌ ರನ್‌ರೇಟ್‌ ಆಧಾರದಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಪ್ಲೇ-ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಮುಂಬೈ ಗೆದ್ದರೆ ಆಗ ಡೆಲ್ಲಿ ನಾಕೌಟ್‌ ರೇಸ್‌ನಿಂದ ಹೊರಬೀಳಲಿದ್ದು, ಆರ್‌ಸಿಬಿಗೆ ಪ್ಲೇ-ಆಫ್‌ ಅವಕಾಶ ಸಿಗಲಿದೆ. 14 ಆವೃತ್ತಿಗಳಲ್ಲಿ 7 ಬಾರಿ ಪ್ಲೇ-ಆಫ್‌ ಪ್ರವೇಶಿಸಿರುವ ಆರ್‌ಸಿಬಿ 8ನೇ ಅವಕಾಶಕ್ಕಾಗಿ ಮುಂಬೈ ಗೆಲುವನ್ನು ಅವಲಂಬಿಸಿದೆ.

ಮುಂಬೈ ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರಗುಳಿದಿದ್ದು, ಪ್ರತಿಷ್ಠೆಗಾಗಿ ಮಾತ್ರ ಆಡುತ್ತಿದೆ. 13 ಪಂದ್ಯಗಳಲ್ಲಿ 22 ಆಟಗಾರರನ್ನು ಕಣಕ್ಕಿಳಿಸಿರುವ ತಂಡ ಕೊನೆ ಪಂದ್ಯದಲ್ಲಿ ಮತ್ತಷ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮೊದಲ ಮುಖಾಮುಖಿಯಲ್ಲಿ ಡೆಲ್ಲಿಗೆ ಶರಣಾಗಿದ್ದ ಮುಂಬೈ ಇಂಡಿಯನ್ಸ್‌ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಮುಂಬೈಗೆ ಫಾಫ್‌, ಕೊಹ್ಲಿ ಬೆಂಬಲ!

ಆರ್‌ಸಿಬಿಗೆ ಮುಂಬೈ ಗೆಲುವು ಅನಿವಾರ್ಯವಾಗಿರುವ ಕಾರಣ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿ ಹಾಗೂ ವಿರಾಟ್‌ ಕೊಹ್ಲಿ ಮುಂಬೈಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಗುಜರಾತ್‌ ವಿರುದ್ಧದ ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ಅವರು, ‘2 ದಿನ ಆರಾಮವಾಗಿದ್ದು ಮುಂಬೈಯನ್ನು ಬೆಂಬಲಿಸುತ್ತೇವೆ. ಮುಂಬೈಗೆ ಇನ್ನೂ ಎರಡು ಬೆಂಬಲಿಗರ ಸೇರ್ಪಡೆಯಾಗಲಿದೆ. ಎರಡಲ್ಲ, 25 ಬೆಂಬಲಿಗರನ್ನು ಹೊಂದಲಿದೆ’ ಎಂದು ಕೊಹ್ಲಿ ನಗುತ್ತಲೇ ಹೇಳಿದ್ದಾರೆ. ಡು ಪ್ಲೆಸಿ ಈ ವೇಳೆ ಮುಂಬೈ... ಮುಂಬೈ ಎಂದು ಕೂಗಿದಾಗ, ‘ನೀವು ನಮ್ಮನ್ನು ಕ್ರೀಡಾಂಗಣದಲ್ಲೂ ನೋಡಬಹುದು’ ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್‌ ಕಪ್​​​​​ ​​​​ಗೆದ್ದ ಬಿಗ್​​​ 3 ತಂಡಗಳು​ ಪ್ಲೇ ಆಫ್​​​ನಿಂದ ಔಟ್​​..!

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ತಂಡಗಳು ಸಮಾನ ಪೈಪೋಟಿಯನ್ನು ಎದುರಿಸಿವೆ. 31 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 16 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಡೆವಾಲ್ಡ್ ಬ್ರೆವಿಸ್‌, ತಿಲಕ್ ವರ್ಮಾ‌, ಟಿಮ್ ಡೇವಿಡ್‌, ಸ್ಟಬ್ಸ್‌, ರಮನ್‌ದೀಪ್ ಸಿಂಗ್‌, ಜಯದೇವ್ ಉನಾದ್ಕತ್, ಜಸ್ಪ್ರೀತ್ ಬೂಮ್ರಾ, ಮಯಾಂಕ್ ಮಾರ್ಕಂಡೆ, ರಿಲೇ ಮೆರೆಡಿತ್‌.

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್‌, ಸರ್ಫರಾಜ್ ಖಾನ್‌, ಶಾನ್ ಮಾರ್ಷ್‍, ಲಲಿತ್ ಯಾದವ್‌, ರಿಷಭ್ ಪಂತ್‌(ನಾಯಕ), ರೋಮನ್ ಪೊವೆಲ್‌, ಅಕ್ಷರ್ ಪಟೇಲ್‌, ಶಾರ್ದೂಲ್‌ ಠಾಕೂರ್, ಕುಲ್ದೀಪ್ ಯಾದವ್‌, ಏನ್ರಿಚ್ ನೋಕಿಯಾ, ಖಲೀಲ್ ಅಹಮ್ಮದ್‌.

ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌