* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ* ಮಾರ್ಚ್‌ 26ರಿಂದ ಮಹಾರಾಷ್ಟ್ರದ 4 ಸ್ಟೇಡಿಯಂನಲ್ಲಿ ನಡೆಯಲಿವೆ ಪಂದ್ಯಾವಳಿಗಳು* ಶೇ.25% ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಮಹಾರಾಷ್ಟ್ರ ಸರ್ಕಾರ ಅವಕಾಶ..?

ಮುಂಬೈ(ಮಾ.01): ಒಂದು ಕಡೆ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಬಿಸಿಸಿಐ (BCCI) ಭರ್ಜರಿ ಸಿದ್ದತೆಯನ್ನು ನಡೆಸುತ್ತಿದೆ. ಇದೆಲ್ಲದರ ನಡುವೆ ಮಹತ್ವದ ಬೆಳವಣಿಯೊಂದು ನಡೆಯುತ್ತಿದ್ದು, ಐಪಿಎಲ್ ಪಂದ್ಯಗಳನ್ನು ಪ್ರೇಕ್ಷಕರು ಮೈದಾನಕ್ಕೆ ಬಂದು ವೀಕ್ಷಿಸಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ. ಮಹರಾಷ್ಟ್ರದಲ್ಲಿ ನಡೆಯಲಿರುವ ಲೀಗ್ ಹಂತದ ಪಂದ್ಯಗಳಿಗೆ ಶೇ.25% ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸಲು ಅನುವು ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್‌ 26ರಿಂದ ಆರಂಭವಾಗಲಿದೆ. 2022ನೇ ಸಾಲಿನ ಐಪಿಎಲ್‌ನ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿದೆ. ಕೋವಿಡ್ ಭೀತಿಯಿಂದಾಗಿ ಈ ಬಾರಿಯ ಐಪಿಎಲ್‌ ಪಂದ್ಯಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಎನ್ನುವ ಗಾಳಿಸುದ್ದಿ ಕೂಡಾ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಮೈದಾನಕ್ಕೆ 25% ಪ್ರೇಕ್ಷಕರ ಪ್ರವೇಶಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಮುಂಬೈ ಕ್ರಿಕೆಟ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗಳು ತಮ್ಮ ಮೈದಾನಗಳಿಗೆ ಒಂದಷ್ಟು ಪ್ರಮಾಣದ ಪ್ರೇಕ್ಷಕರನ್ನು ಸ್ವಾಗತಿಸಲು ಸಜ್ಜಾಗಿವೆ. ಮುಂಬೈನಲ್ಲಿರುವ ವಾಂಖೆಡೆ ಮೈದಾನ, ಡಿ.ವೈ. ಪಾಟೀಲ್ ಮೈದಾನ ಹಾಗೂ ಬ್ರಬೋರ್ನ್‌ ಮೈದಾನದಲ್ಲಿ ಒಟ್ಟು 55 ಐಪಿಎಲ್ ಲೀಗ್ ಪಂದ್ಯಗಳು ನಡೆದರೆ, ಇನ್ನುಳಿದ 15 ಲೀಗ್ ಪಂದ್ಯಗಳಿಗೆ ಪುಣೆ ಮೈದಾನ ಆತಿಥ್ಯವನ್ನು ವಹಿಸಲಿದೆ. ಇನ್ನು ಪ್ಲೇ ಆಫ್‌ ಪಂದ್ಯಗಳು ಎಲ್ಲಿ ನಡೆಯಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಇನ್ನೂ ತನ್ನ ಅಧಿಕೃತ ತೀರ್ಮಾನವನ್ನು ಪ್ರಕಟಿಸಿಲ್ಲ.

IPL 2022: ಈ ಬಾರಿ ಹೊಸ ರೂಪದಲ್ಲಿ ಐಪಿಎಲ್‌ ಝಲಕ್‌..!

ಮಹಾರಾಷ್ಟ್ರ ಸರ್ಕಾರದ (Maharashtra Government) ಸಚಿವ ಆದಿತ್ಯ ಠಾಕ್ರೆ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಐಪಿಎಲ್ (IPL 2022) ಪಂದ್ಯಗಳು ನಡೆಯುವ ವೇಳೆ ಶೇ.25% ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸಲು ಸಮ್ಮತಿ ಸೂಚಿಸಿದ್ದಾರೆ. ಮುಖ್ಯವಾದ ವಿಚಾರವೆಂದರೆ ಮುಂಬೈನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್ 19 (Covid 19) ಪ್ರಕರಣಗಳು ಕಡಿಮೆಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ ಕೇವಲ 1,000 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 2 ಸಾವುಗಳು ಮಾತ್ರ ಸಂಭವಿಸಿವೆ. 

ಹೊಸ ರೂಪದಲ್ಲಿ ಈ ಬಾರಿಗೆ ಐಪಿಎಲ್ ಟೂರ್ನಿ:

15ನೇ ಆವೃತ್ತಿಯ ಐಪಿಎಲ್ ಟೂರ್ನಿ ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಇದರ ಅನುಸಾರ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈಗೆ ಮೊದಲ ಸ್ಥಾನ ಸಿಕ್ಕಿದ್ದು, ‘ಎ’ ಗುಂಪಿನಲ್ಲಿದೆ. 4 ಟ್ರೋಫಿ ಗೆದ್ದಿರುವ ಚೆನ್ನೈ 2ನೇ ಸ್ಥಾನ ಸಿಕ್ಕಿದ್ದು, ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ.

ಆರ್‌ಸಿಬಿ ತಂಡವು ಸನ್‌ರೈಸ​ರ್ಸ್‌ , ಪಂಜಾಬ್‌ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ವಿರುದ್ಧ ತಲಾ 2 ಪಂದ್ಯವನ್ನಾಡಲಿದ್ದು, ‘ಎ’ ಗುಂಪಿನಲ್ಲಿರುವ ರಾಜಸ್ಥಾನ ವಿರುದ್ಧ 2 ಪಂದ್ಯವನ್ನಾಡಲಿದೆ. ಇನ್ನುಳಿದ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ.