* ಡೆಲ್ಲಿ ಕ್ಯಾಪಿಟಲ್ಸ್ ಎದುರು ರೋಚಕ ಜಯ ಸಾಧಿಸಿದ ಲಖನೌ ಸೂಪರ್ ಜೈಂಟ್ಸ್* ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ರನ್‌ಗಳ ರೋಚಕ ಸೋಲು* ಅಕ್ಷರ್ ಪಟೇಲ್ ಏಕಾಂಗಿ ಹೋರಾಟ ವ್ಯರ್ಥ
ಮುಂಬೈ(ಮೇ.01): ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಮಣಿಸಿದ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 7ನೇ ಗೆಲುವು ದಾಖಲಿಸುವ ಮೂಲಕ ಕೆ.ಎಲ್. ರಾಹುಲ್ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 196 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 13 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಪೃಥ್ವಿ ಶಾ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಡೇವಿಡ್ ವಾರ್ನರ್ ಬ್ಯಾಟಿಂಗ್ 3 ರನ್‌ಗಳಿಗೆ ಸೀಮಿತವಾಯಿತು. ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಿಚೆಲ್ ಮಾರ್ಶ್ ಹಾಗೂ ನಾಯಕ ರಿಷಭ್ ಪಂತ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 60 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಿಚೆಲ್ ಮಾರ್ಶ್ 20 ಎಸೆತಗಳಲ್ಲಿ 37 ರನ್ ಚಚ್ಚಿದರು. ಇನ್ನು ಮತ್ತೊಂದು ತುದಿಯಲ್ಲಿ ನಾಯಕ ರಿಷಭ್ ಪಂತ್ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಲಲಿತ್ ಯಾದವ್ 3 ರನ್ ಬಾರಿಸಿ ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಕೊನೆಯಲ್ಲಿ ರೋಮನ್ ಪೊವೆಲ್ ಕೇವಲ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 35 ಬಾರಿಸುವ ಮೂಲಕ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ ಲಖನೌ ಸೂಪರ್ ಜೈಂಟ್ಸ್ ವೇಗಿ ಮೊಯ್ಸಿನ್ ಖಾನ್ ಒಂದೇ ಓವರ್‌ನಲ್ಲಿ ರೋಮನ್ ಪೊವೆಲ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಬಲಿ ಪಡೆಯುವ ಮೂಲಕ ಗೆಲುವು ಲಖನೌ ಕಡೆ ವಾಲುವಂತೆ ಮಾಡಿದರು.
ಕೊನೆಯ ಎರಡು ಓವರ್‌ಗಳಲ್ಲಿ ಡೆಲ್ಲಿ ತಂಡವು ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಡೆಲ್ಲಿ ಬ್ಯಾಟರ್‌ಗಳಾದ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ 15 ರನ್ ಕಲೆಹಾಕುವ ಮೂಲಕ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದಿತ್ತರು. ಹೀಗಾಗಿ ಕೊನೆಯ ಓವರ್‌ನಲ್ಲಿ ಲಖನೌ ಗೆಲ್ಲಲು 21 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡ ಮಾರ್ಕಸ್ ಸ್ಟೋನಿಸ್‌ಗೆ ಓವರ್‌ನ ಮೊದಲ ಎಸೆತದಲ್ಲೇ ಕುಲ್ದೀಪ್ ಯಾದವ್ ಸಿಕ್ಸರ್ ಚಚ್ಚುವ ಮೂಲಕ ಶಾಕ್ ನೀಡಿದರು. ಆದರೆ ಆ ಬಳಿಕ ಕಮ್‌ಬ್ಯಾಕ್ ಮಾಡುವಲ್ಲಿ ಸ್ಟೋನಿಸ್ ಯಶಸ್ವಿಯಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಕ್ಷರ್ ಪಟೇಲ್ ಕೇವಲ 24 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
IPL 2022: ರಾಹುಲ್, ಹೂಡಾ ಫಿಫ್ಟಿ, ಡೆಲ್ಲಿಗೆ ಗೆಲ್ಲಲು ಕಠಿಣ ಗುರಿ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಕ್ವಿಂಟನ್ ಡಿ ಕಾಕ್ ಹಾಗೂ ಕೆ.ಎಲ್. ರಾಹುಲ್ ಉತ್ತಮ ಆರಂಭವನ್ನು ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 42 ರನ್‌ಗಳ ಜತೆಯಾಟ ನಿಭಾಯಿಸಿತು. ಕ್ವಿಂಟನ್ ಡಿ ಕಾಕ್ 23 ರನ್ ಬಾರಿಸಿದರೆ, ನಾಯಕ ಕೆ.ಎಲ್. ರಾಹುಲ್(77) ಹಾಗೂ ದೀಪಕ್ ಹೂಡಾ(52) ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
