* ಡೆಲ್ಲಿ ಎದುರು ಅರ್ಧಶತಕ ಚಚ್ಚಿದ ರಾಹುಲ್, ಹೂಡಾ* ಮೊದಲು ಬ್ಯಾಟ್ ಮಾಡಿ 195 ರನ್ ಕಲೆಹಾಕಿದ ಲಖನೌ ಸೂಪರ್ ಜೈಂಟ್ಸ್* 3 ವಿಕೆಟ್ ಕಬಳಿಸಿ ಗಮನ ಸೆಳೆದ ಶಾರ್ದೂಲ್ ಠಾಕೂರ್
ಮುಂಬೈ(ಮೇ.01): ನಾಯಕ ಕೆ.ಎಲ್. ರಾಹುಲ್ (KL Rahul) ಹಾಗೂ ದೀಪಕ್ ಹೂಡಾ (Deepak Hooda) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಾರ್ದೂಲ್ ಠಾಕೂರ್ (Shardul Thakur) 3 ವಿಕೆಟ್ ಕಬಳಿಸಿ ಗಮನ ಸೆಳೆದರು.
ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡ ಲಖನೌ ಸೂಪರ್ ಜೈಂಟ್ಸ್ ತಂಡವು ಉತ್ತಮ ಅರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ಕೆ.ಎಲ್. ರಾಹುಲ್ ತಂಡಕ್ಕೆ ಸ್ಪೋಟಕ ಆರಂಭವನ್ನು ಒದಗಿಸಿಕೊಟ್ಟರು. ಕೇವಲ 4.2 ಓವರ್‌ಗಳಲ್ಲಿ ಈ ಜೋಡಿ 42 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಕ್ವಿಂಟನ್ ಡಿ ಕಾಕ್ ಕೇವಲ 13 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ರಾಹುಲ್-ಹೂಡಾ ಭರ್ಜರಿ ಜತೆಯಾಟ: ಕ್ವಿಂಟನ್ ಡಿ ಕಾಕ್ ವಿಕೆಟ್ ಪತನದ ಬಳಿಕ ನಾಯಕ ಕೆ.ಎಲ್. ರಾಹುಲ್‌ರನ್ನು ಕೂಡಿಕೊಂಡ ದೀಪಕ್ ಹೂಡಾ ಲಖನೌ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 95 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಪ್ರತಿ ಓವರ್‌ಗೆ ಸರಾಸರಿ 10ರಂತೆ ರನ್ ಕಲೆಹಾಕಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ದೀಪಕ್ ಹೂಡಾ ಕೇವಲ 34 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ ನಾಯಕ ಕೆ.ಎಲ್. ರಾಹುಲ್ 51 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 77 ರನ್ ಬಾರಿಸಿ ಶಾರ್ದೂಲ್ ಠಾಕೂರ್‌ಗೆ ಮೂರನೇ ಬಲಿಯಾದರು.
IPL 2022: ಡೆಲ್ಲಿ ಕ್ಯಾಪಿಟಲ್ಸ್ ಎದುರು ಟಾಸ್ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ
ಒಂದು ಹಂತದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಅನಾಯಾಸವಾಗಿ ಇನ್ನೂರು ರನ್‌ಗಳ ಗಡಿ ದಾಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ದೀಪಕ್ ಹೂಡಾ ವಿಕೆಟ್ ಪತನವಾಗುತ್ತಿದ್ದಂತೆಯೇ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ಯಶಸ್ವಿಯಾದರು. ಕೊನೆಯಲ್ಲಿ ಮಾರ್ಕಸ್ ಸ್ಟೋನಿಸ್ 16 ಎಸೆತಗಳನ್ನು ಎದುರಿಸಿ ಕೇವಲ 17 ರನ್ ಬಾರಿಸಿದರೆ, ದೀಪಕ್ ಹೂಡಾ 6 ಎಸೆತಗಳಲ್ಲಿ 9 ರನ್‌ಗಳಿಸಿ ಅಜೇಯರಾಗುಳಿದರು.
ಸಂಕ್ಷಿಪ್ತ ಸ್ಕೋರ್
ಲಖನೌ ಸೂಪರ್ ಜೈಂಟ್ಸ್: 195/3
ಕೆ.ಎಲ್. ರಾಹುಲ್: 77
ದೀಪಕ್ ಹೂಡಾ: 52
ಶಾರ್ದೂಲ್ ಠಾಕೂರ್: 40/3
(* ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮುಕ್ತಾದ ವೇಳೆಗೆ)
