IPL 2022: ಲಖನೌ ಸೂಪರ್ ಜೈಂಟ್ಸ್ ಸವಾಲು ಗೆಲ್ಲುತ್ತಾ ಆರ್‌ಸಿಬಿ..?
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದು ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ಸವಾಲು
* ತಲಾ 4 ಪಂದ್ಯಗಳಲ್ಲಿ ಗೆಲುವು ಕಂಡಿರುವ ಉಭಯ ತಂಡಗಳು
* ಪುನಃ ಅಬ್ಬರಿಸುವ ಉತ್ಸಾಹದಲ್ಲಿ ದಿನೇಶ್ ಕಾರ್ತಿಕ್
ನವಿ ಮುಂಬೈ(ಏ.19): ಚೆನ್ನೈ ಸೂಪರ್ ಕಿಂಗ್‌್ಸ ವಿರುದ್ಧದ ಸೋಲಿನ ಬಳಿಕ ಪುಟಿದೆದ್ದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲುಣಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿ 4ರಲ್ಲಿ ಗೆಲುವು ಸಾಧಿಸಿದೆ. ಪಂಜಾಬ್ ವಿರುದ್ಧದ ಆರಂಭಿಕ ಪಂದ್ಯದ ಸೋಲಿನ ಬಳಿಕ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ತಂಡ ಸುಧಾರಿತ ಪ್ರದರ್ಶನ ನೀಡುತ್ತಿದ್ದರೂ ಲಖನೌ ಎದುರು ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಅತ್ತ ಲಖನೌ ಕೂಡಾ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಮತ್ತೆ ಸಿಡಿಯುತ್ತಾರಾ ಡಿಕೆ?
ಆಡಿದ ಎಲ್ಲಾ ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ದಿನೇಶ್ ಕಾರ್ತಿಕ್ ಆರ್‌ಸಿಬಿಯ ಪ್ಲಸ್ ಪಾಯಿಂಟ್. ಸೋಲಬೇಕಾದ ಪಂದ್ಯಗಳನ್ನೂ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಅವರು ಈವರೆಗೆ 6 ಪಂದ್ಯಗಳಲ್ಲಿ 199 ರನ್ ಕಲೆ ಹಾಕಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳಲ್ಲಿ 190+ ಸ್ಟೆ್ರೖಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಗಮನಾರ್ಹ ಸಂಗತಿ. ತಂಡದ ಮತ್ತೊಂದು ಭರವಸೆ ಗ್ಲೆನ್ ಮ್ಯಾಕ್ಸ್‌ವೆಲ್‌ರ ಅಬ್ಬರದ ಬ್ಯಾಟಿಂಗ್. ಅವರು ಸಿಡಿದರೆ ಎದುರಾಳಿ ಬೌಲರ್‌ಗಳಿಗೆ ಉಳಿಗಾಲವಿಲ್ಲ. ಇನ್ನು ನಾಯಕ ಡು ಪ್ಲೆಸಿ, ವಿರಾಟ್ ಕೊಹ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದ್ದು, ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಯುವ ಆಟಗಾರರಾದ ಅನುಜ್ ರಾವತ್, ಶಾಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದಾರೆ.
ಚೆನ್ನೈ ವಿರುದ್ಧದ ಕಳೆದ ಮುಖಭಂಗ ಅನುಭವಿಸಿದ್ದ ತಂಡದ ಬೌಲಿಂಗ್ ಪಡೆ ಡೆಲ್ಲಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಪ್ರಮುಖ ವೇಗಿ ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದು ಬೌಲಿಂಗ್ ಪಡೆಗೆ ಬಲ ಒದಗಿಸಿದೆ. ಟೂರ್ನಿಯುದ್ದಕ್ಕೂ ದುಬಾರಿ ಎನಿಸಿದ್ದ ಮೊಹಮದ್ ಸಿರಾಜ್ ಲಯ ಕಂಡುಕೊಂಡಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ತಮ್ಮ ವೇಗದ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಂಟಕವಾಗುವ ಸಾಧ್ಯತೆ ಇದೆ. ವಾನಿಂಡು ಹಸರಂಗ ಲಖನೌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಜವಾಬ್ದಾರಿ ನಿಭಾಯಿಸಬೇಕಿದ್ದು, ಶಾಬಾಜ್ ಹಾಗೂ ಮ್ಯಾಕ್ಸ್‌ವೆಲ್ ಅವರಿಗೆ ಉತ್ತಮ ಬೆಂಬಲ ತೋರಬೇಕಿದೆ.
ರಾಹುಲ್ ಪಡೆಗೆ ಆಲ್ರೌಂಡರ್‌ಗಳ ಬಲ
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೆ.ಎಲ್.ರಾಹುಲ್, ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಆರ್‌ಸಿಬಿ ಬೌಲರ್‌ಗಳ ಎದುರಿರುವ ಪ್ರಮುಖ ಸವಾಲು. ಕನ್ನಡಿಗ ಮನೀಶ್ ಪಾಂಡೆ, ದೀಪಕ್ ಹೂಡಾ, ಯುವ ತಾರೆ ಆಯುಶ್ ಬದೋನಿ ಕೂಡಾ ತಮ್ಮ ಆಕರ್ಷಕ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಅವರನ್ನೊಳಗೊಂಡ ಆಲ್ರೌಂಡರ್ ಪಡೆ ತಂಡದ ಪ್ಲಸ್ ಪಾಯಿಂಟ್. 6 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿರುವ ಆವೇಶ್ ಖಾನ್ ತಂಡದ ಬೌಲಿಂಗ್ ಟ್ರಂಪ್‌ಕಾರ್ಡ್ಸ್ ಎನಿಸಿಕೊಂಡಿದ್ದು, ರವಿ ಬಿಷ್ಣೋಯ್ ಮತ್ತೊಮ್ಮೆ ಸ್ಪಿನ್ ಮೋಡಿ ಮಾಡಲು ಎದುರು ನೋಡುತ್ತಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿ(ನಾಯಕ), ಅನೂಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯ, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.
ಲಖನೌ: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್, ಜೇಸನ್ ಹೋಲ್ಡರ್, ದುಸ್ಮಂತ ಚಮೀರ, ರವಿ ಬಿಷ್ಣೋಯ್, ಆವೇಶ್ ಖಾನ್.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಕ್ರೀಡಾಂಗಣ,
ಪಂದ್ಯ: ಸಂಜೆ 7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್