* ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕಿಂದು ಗುಜರಾತ್ ಟೈಟಾನ್ಸ್* ಪ್ಲೇ ಆಫ್‌ಗೇರಲು ಎದುರು ತುದಿಗಾಲಿನಲ್ಲಿ ನಿಂತಿವೆ ಉಭಯ ತಂಡಗಳು* ಇಂದಿನ ಪಂದ್ಯದಲ್ಲಿ ವಿಜೇತವಾಗುವ ತಂಡವು ಅಧಿಕೃತವಾಗಿ ಪ್ಲೇ ಆಫ್‌ಗೆ ಅರ್ಹತೆ

ಪುಣೆ(ಮೇ.10): 15ನೇ ಆವೃತ್ತಿ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳುವ ಕಾತರದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನೂತನ ತಂಡಗಳಾದ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸದ್ಯ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ವಿಜೇತವಾಗುವ ತಂಡವು ಅಧಿಕೃತವಾಗಿ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲಿದೆ.

ಉಭಯ ತಂಡಗಳೂ ತಲಾ 11 ಪಂದ್ಯಗಳನ್ನಾಡಿದ್ದು, ತಲಾ 8ರಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಖಾತೆಯಲ್ಲಿ 16 ಅಂಕಗಳನ್ನು ಹೊಂದಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ-ಆಫ್‌ ಸ್ಥಾನ ಅಧಿಕೃತಗೊಳಿಸಿಕೊಳ್ಳಲಿದೆ. ಸದ್ಯ ಕೆ.ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ 2ನೇ ಕಾಯ್ದುಕೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್‌ ನಾಯಕತ್ವದ ಟೈಟಾನ್ಸ್‌ ಅಬ್ಬರದ ಪ್ರದರ್ಶನ ನೀಡಿದ್ದರೂ ಕಳೆದೆರಡು ಪಂದ್ಯಗಳಲ್ಲಿ ಪಂಜಾಬ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತು ಅಗ್ರಸ್ಥಾನ ಕಳೆದುಕೊಂಡಿತ್ತು. ಅತ್ತ ಲಖನೌ ಸೂಪರ್ ಜೈಂಟ್ಸ್‌ ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಟೈಟಾನ್ಸ್‌ಗೆ ಶರಣಾಗಿದ್ದ ಕೆ.ಎಲ್‌.ರಾಹುಲ್‌ ಸಾರಥ್ಯದ ಲಖನೌ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಲಖನೌ ಸೂಪರ್ ಜೈಂಟ್ಸ್‌ ತಂಡವು ಪ್ಲೇ ಆಫ್‌ಗೆ ಸಮೀಪಿಸುತ್ತಿದ್ದಂತೆಯೇ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಕೆ.ಎಲ್ ರಾಹುಲ್ ರನ್ ಮಳೆ ಹರಿಸಲಾರಂಭಿಸಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ದೀಪಕ್ ಹೂಡಾ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಮಾರ್ಕಸ್ ಸ್ಟೋನಿಸ್ ಕೂಡಾ ಕೇವಲ 14 ಎಸೆತಗಳಲ್ಲಿ 28 ರನ್ ಚಚ್ಚುವ ಮೂಲಕ ಫಾರ್ಮ್‌ಗೆ ಮರಳುವ ಮುನ್ಸೂಚನೆ ನೀಡಿದ್ದಾರೆ. ಇನ್ನು ಲಖನೌ ತಂಡದಲ್ಲಿ ಆವೇಶ್ ಖಾನ್, ಮೊಯ್ಸಿನ್ ಖಾನ್, ದುಸ್ಮಂತಾ ಚಮೀರಾ ಹಾಗೂ ಜೇಸನ್ ಹೋಲ್ಡರ್ ಅವರಂತಹ ಮಾರಕ ವೇಗಿಗಳ ದಂಡೇ ಇದ್ದು, ಈಗಾಗಲೇ ಈ ಬೌಲರ್‌ಗಳು 44 ಬಲಿ ಪಡೆದಿದ್ದಾರೆ. 

ಸಂಭವನೀಯ ಆಟಗಾರರ ಪಟ್ಟಿ

ಟೈಟಾನ್ಸ್‌: ಶುಭ್‌ಮನ್‌ ಗಿಲ್‌, ವೃದ್ದಿಮಾನ್ ಸಾಹ, ಸಾಯಿ ಸುದರ್ಶನ್‌, ಹಾರ್ದಿಕ್‌ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಪ್ರದೀಪ್ ಸಂಗ್ವಾನ್‌, ಲಾಕಿ ಫಗ್ರ್ಯೂಸನ್‌, ಅಲ್ಜೆರಿ ಜೋಸೆಫ್‌, ಮೊಹಮ್ಮದ್ ಶಮಿ.

ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್‌, ಕೆ.ಎಲ್‌.ರಾಹುಲ್‌(ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್‌, ಕೃನಾಲ್ ಪಾಂಡ್ಯ‌, ಆಯುಷ್ ಬದೋನಿ, ಜೇಸನ್ ಹೋಲ್ಡರ್‌, ದುಸ್ಮಂತಾ ಚಮೀರ, ರವಿ ಬಿಷ್ಣೋಯ್‌, ಮೊಹ್ಸಿನ್ ಖಾನ್‌, ಆವೇಶ್ ಖಾನ್‌.

ಸ್ಥಳ: ಎಂಸಿಎ ಕ್ರೀಡಾಂಗಣ ಪುಣೆ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್