* ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕಿಂದು ರಾಜಸ್ಥಾನ ರಾಯಲ್ಸ್‌* ಪ್ಲೇ ಆಫ್‌ಗೇರಲು ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಬೇಕಿದೆ ಇನ್ನೊಂದು ಗೆಲುವು* ರಾಜಸ್ಥಾನ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ

ಮುಂಬೈ(ಮೇ.15): 15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ (IPL Play offs) ಸ್ಥಾನ ಖಚಿತಪಡಿಸಿಕೊಳ್ಳುವ ತವಕದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants), ಭಾನುವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಾಡಲಿದೆ. ರಾಜಸ್ಥಾನಕ್ಕೂ ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದೆನಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಬ್ರೆಬೋರ್ನ್‌ ಮೈದಾನ ಆತಿಥ್ಯವನ್ನು ವಹಿಸಿದೆ. 

ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಖನೌ ಆಡಿದ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ತಲುಪಿಸುವ ಜೊತೆಗೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಖಚಿತವಾಗಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ (Gujarat Titans) ವಿರುದ್ಧ ಸೋತಿದ್ದ ತಂಡ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ. ಆದರೆ ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು ಪ್ಲೇ-ಆಫ್‌ಗೇರುವ ಹುಮಸ್ಸಿನಲ್ಲಿರುವ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.

ಕಳೆದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ದ 62 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಲಖನೌ ಸೂಪರ್ ಜೈಂಟ್ಸ್ ತಂಡವು ಅಗ್ರಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಕ್ರಮಾಂಕ ಹೊಂದಿದ್ದು, ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ಕೆ ಎಲ್‌ ರಾಹುಲ್ ಹಾಗೂ ದೀಪಕ್ ಹೂಡಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಕೊಂಚ ದುರ್ಬಲವಾಗಿ ಕಂಡು ಬರುತ್ತಿದೆ. ಮಾರ್ಕಸ್‌ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ ಹಾಗೂ ಜೇಸನ್ ಹೋಲ್ಡರ್‌ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಬೌಲಿಂಗ್‌ನಲ್ಲಿ ದುಸ್ಮಂತ ಚಮೀರಾ, ರವಿ ಬಿಷ್ಣೋಯಿ, ಆವೇಶ್ ಖಾನ್ ಹಾಗೂ ಮೊಯ್ಸಿನ್ ಖಾನ್ ಮಾರಕ ದಾಳಿ ನಡೆಸಿದರೆ ರಾಜಸ್ಥಾನ ರಾಯಲ್ಸ್‌ ಎದುರು ಗೆಲುವು ಕಷ್ಟವೇನಲ್ಲ.

CSK vs GT: ಟೈಟಾನ್ಸ್‌ಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಹುಮ್ಮಸ್ಸು..!

ಇನ್ನು ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿದ್ದರೆ, ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಗೆಲುವು ಸಾಧಿಸುವುದು ಅನಿವಾರ್ಯ ಎನಿಸಿದೆ. ಅಗ್ರಕ್ರಮಾಂಕದಲ್ಲಿ ಜೋಸ್ ಬಟ್ಲರ್ ಭರ್ಜರಿ ಫಾರ್ಮ್‌ನಲ್ಲಿದ್ದು, ಬಟ್ಲರ್ ಜತೆಗೆ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್‌, ದೇವದತ್ ಪಡಿಕ್ಕಲ್ ಹಾಗೂ ರಾಸ್ಸಿ ವ್ಯಾನ್ ಡರ್‌ ಡುಸೇನ್‌ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ನೆರವಾಗಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್‌, ಪ್ರಸಿದ್ದ್ ಕೃಷ್ಣ, ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಸೆನ್ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದರೆ ಬಲಿಷ್ಠ ಲಖನೌ ಸೂಪರ್‌ ಜೈಂಟ್ಸ್‌ಗೆ ತಿರುಗೇಟು ನೀಡಬಹುದಾಗಿದೆ.

ಸಂಭಾವ್ಯ ತಂಡ ಹೀಗಿವೆ ನೋಡಿ

ಲಖನೌ ಸೂಪರ್‌ ಜೈಂಟ್ಸ್: ಕ್ವಿಂಟನ್ ಡಿ ಕಾಕ್(ವಿಕೆಟ್‌ ಕೀಪರ್), ಕೆ.ಎಲ್‌. ರಾಹುಲ್(ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಜೇಸನ್‌ ಹೋಲ್ಡರ್, ದುಸ್ಮಂತ ಚಮೀರಾ, ರವಿ ಬಿಷ್ಣೋಯಿ, ಆವೇಶ್ ಖಾನ್, ಮೊಯ್ಸಿನ್ ಖಾನ್.

ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ&ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರಾಸ್ಸಿ ವ್ಯಾನ್ ಡರ್ ಡುಸೇನ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ದ್ ಕೃಷ್ಣ, ಯುಜುವೇಂದ್ರ ಚಹಲ್, ಕುಲ್ದೀಪ್ ಸೆನ್.

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌