* ಗುಜರಾತ್ ಟೈಟಾನ್ಸ್ ತಂಡಕ್ಕಿಂದು ಚೆನ್ನೈ ಸೂಪರ್ ಕಿಂಗ್ಸ್ ಸವಾಲು* ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದೆ ಗುಜರಾತ್ ಟೈಟಾನ್ಸ್* ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್
ಮುಂಬೈ(ಮೇ.15): ಈಗಾಗಲೇ 15ನೇ ಆವೃತ್ತಿ ಐಪಿಎಲ್‌ನ (Indian Premier League) ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಗುಜರಾತ್ ಟೈಟಾನ್ಸ್ (Gujarat Titans) ಮತ್ತೊಂದು ಗೆಲುವಿನ ಮೂಲಕ ಅಗ್ರ 2ರಲ್ಲಿ ಸ್ಥಾನ ಉಳಿಸಿಕೊಂಡು ಪ್ಲೇ-ಆಫ್‌ನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯುವ ಗುರಿ ಹೊಂದಿದೆ. ಟೈಟಾನ್ಸ್ ಗುರಿ ಈಡೇರಬೇಕಿದ್ದರೆ, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಜಯಗಳಿಸಬೇಕಿದೆ.
ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟಾನ್ಸ್ 12 ಪಂದ್ಯಗಳಲ್ಲಿ 18 ಅಂಕ ಸಂಪಾದಿಸಿದೆ. ಹಾರ್ದಿಕ್ ಪಾಂಡ್ಯ (Hardik Pandya) ಪಡೆಗೆ 2 ಪಂದ್ಯ ಬಾಕಿ ಇದ್ದು, ಅಗ್ರ-2ರಲ್ಲಿ ಉಳಿಯಲು ಒಂದು ಗೆಲುವು ಸಾಕು. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ 12 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದಿದ್ದು, ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿದಿದೆ. ತಂಡಕ್ಕೆ ಇದು ಪ್ರತಿಷ್ಠೆಯ ಪಂದ್ಯವಾಗಿದ್ದು, ಅಂಕಪಟ್ಟಿಯ ಕೊನೆ ಸ್ಥಾನ ತಪ್ಪಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಜತೆ ಜೊತೆ ಪೈಪೋಟಿ ನಡೆಸುತ್ತಿದೆ.
ಗುಜರಾತ್ ಟೈಟಾನ್ಸ್ ತಂಡವು ಸಾಂಘಿಕ ಪ್ರದರ್ಶನ ತೋರುವ ಮೂಲಕ ಈಗಾಗಲೇ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಎಲ್ಲಾ ಆಟಗಾರರು ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ (David Miller) ಹಾಗೂ ರಾಹುಲ್ ತೆವಾಟಿಯಾ ಜವಾಬ್ದಾರಿಯುತ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಯಶ್ ದಯಾಳ್, ಅಲ್ಜೆರಿ ಜೋಸೆಫ್ ಜತೆಗೆ ಸ್ಪಿನ್ನರ್‌ಗಳಾದ ರಶೀದ್ ಖಾನ್ ಹಾಗೂ ಸಾಯಿ ಕಿಶೋರ್ ಹೊಣೆಯರಿತು ಬೌಲಿಂಗ್ ಮಾಡುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ಪ್ಲಸ್ ಪಾಯಿಂಟ್ ಎನಿಸಿದೆ.
IPL 2022 ಸನ್ ರೈಸರ್ಸ್ ತಂಡಕ್ಕೆ ಹೀನಾಯ ಸೋಲು
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ ಉತ್ತಮ ಆರಂಭ ಒದಗಿಸಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ (Moeen Ali), ಅಂಬಟಿ ರಾಯುಡು, ಶಿವಂ ದುಬೆ ಹಾಗೂ ಧೋನಿ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದ್ದರೆ ಡ್ವೇನ್ ಬ್ರಾವೋ, ಮಹೀಶ್ ತೀಕ್ಷಣ, ಮಕೇಶ್ ಚೌಧರಿ ಹಾಗೂ ಕೆ ಎಂ ಆಸಿಫ್ ಮಾರಕ ದಾಳಿ ಸಂಘಟಿಸಬೇಕಿದೆ.
ಸಂಭಾವ್ಯ ತಂಡ ಹೀಗಿದೆ ನೋಡಿ
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ, ಡ್ವೇನ್ ಬ್ರಾವೊ, ಎಂ ಎಸ್ ಧೋನಿ, ಸಿಮರ್‌ಜೀತ್ ಸಿಂಗ್, ಮುಕೇಶ್ ಚೌಧರಿ, ಮಹೀಶ್ ತೀಕ್ಷಣ, ಕೆ ಎಂ ಆಸಿಫ್.
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಅಲ್ಜೆರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
