IPL 2022: ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ
* ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ
* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಣ್ಣಿಟ್ಟ ಸಂಜು ಸ್ಯಾಮ್ಸನ್ ಪಡೆ
* ಗೆಲುವಿನ ಲಯ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್
ಮುಂಬೈ(ಏ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 34ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ (Rishabh Pant) ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.
ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಈ ಪಂದ್ಯಕ್ಕೂ ಕಣಕ್ಕಿಳಿದಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ಪರ ಜೋಸ್ ಬಟ್ಲರ್ ಭರ್ಜರಿ ಫಾರ್ಮ್‌ನಲ್ಲಿದ್ದು, ಬಟ್ಲರ್‌ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಉತ್ತಮ ಸಾಥ್ ನೀಡಲು ಎದುರು ನೋಡುತ್ತಿದ್ದಾರೆ. ಸದ್ಯ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. 6 ಪಂದ್ಯಗಳಲ್ಲಿ 375 ರನ್ ಸಿಡಿಸಿರುವ ಜೋಸ್ ಬಟ್ಲರ್ ರಾಜಸ್ಥಾನದ ಬ್ಯಾಟಿಂಗ್ ಆಧಾರಸ್ತಂಭ. ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೇಯರ್ ಕೂಡಾ ಅಪಾಯಕಾರಿಯಾಗಿ ತೋರುತ್ತಿದ್ದಾರೆ.
ಇದು ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಜೋಡಿ ಯಜುವೇಂದ್ರ ಚಹಲ್-ಕುಲ್ದೀಪ್ ಯಾದವ್ ನಡುವಿನ ಸ್ಪರ್ಧೆ ಎನಿಸಿಕೊಂಡಿದೆ. ರಾಜಸ್ಥಾರ ರಾಯಲ್ಸ್ ಪರ ಆಡುತ್ತಿರುವ ಚಹಲ್ 6 ಪಂದ್ಯಗಳಲ್ಲಿ 17 ವಿಕೆಟ್ ಕಿತ್ತು ವಿಕೆಟ್ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿಯ ಕುಲ್ದೀಪ್ ಯಾದವ್ 6 ಪಂದ್ಯಗಳಲ್ಲಿ 13 ವಿಕೆಟ್ ಎಗರಿಸಿದ್ದಾರೆ. ಉಭಯ ತಂಡಗಳೂ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಈ ಇಬ್ಬರೂ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೆಸೆಯಲಿದ್ದಾರೆ.
IPL 2022 ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮತ್ತೊಂದು ಕೊರೋನಾ ಕೇಸ್, ಕೋಚ್ ರಿಕಿ ಪಾಂಟಿಂಗ್ ಕ್ವಾರಂಟೈನ್!
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲುಗಳೊಂದಿಗೆ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡು ಪಂದ್ಯಗಳನ್ನಾಡಿ 3 ಗೆಲುವು ಹಾಗೂ 3 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ಸಮಾನ ಪೈಪೋಟಿ ನಡೆಸಿವೆ. 24 ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಆಟಗಾರರ ಪಟ್ಟಿ
ಡೆಲ್ಲಿ: ಪೃಥ್ವಿ ಶಾ, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ರಿಷಭ್ ಪಂತ್(ನಾಯಕ), ಲಲಿತ್ ಯಾದವ್, ರೋಮನ್ ಪೋವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹಮ್ಮದ್, ಮುಸ್ತಾಫಿಜುರ್ ರೆಹಮಾನ್.
ರಾಜಸ್ಥಾನ: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರೊನ್ ಹೆಟ್ಮೇಯರ್, ಕರುಣ್ ನಾಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಮೆಕಾಯ್, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್